ಕ್ರಿಮಿಕೀಟಗಳು, ಸೊಳ್ಳೆಗಳು ಹಾಗೂ ಇಲಿಗಳ ಜೊತೆಗೆ ಯಾವುದೇ ಭಿನ್ನಾಭಿಪ್ರಾಯವನ್ನು ತಂದುಕೊಳ್ಳದೆ, ಕಾಡಿನಲ್ಲಿ ಜೀವಿಸುವುದೇ ಒಂದು ದೈವೀಕ ಅನುಭವ. ವನ್ಯಮೃಗಗಳು ಸೌಹಾರ್ದತೆಯನ್ನು ಒಪ್ಪಂದ ಮಾಡಿಕೊಂಡಂತಿದ್ದರೆ, ಕೀಟಗಳು ಹಾಗೂ ಇಲಿಗಳು ಕಾಡಿನೊಟ್ಟಿಗೆ, ತಮ್ಮ ಅಂತರಂಗದಲ್ಲೇ ಒಂದು ಭದ್ರ ನೆಲೆಯ ವ್ಯಾಪಾರ ಮಾಡಿಕೊಂಡಂತಿದೆ. ಆದರೆ ಅವೆಲ್ಲವೂ ನಮಗೆ ತರಬೇತಿ ನೀಡುವುದಕ್ಕೆಂದೇ ಇರುವುದು. ಒಮ್ಮೆ ನೀವು ಅವುಗಳನ್ನು ಸಹಿಸಲು ಕಲಿತರೆ, ಮನುಷ್ಯರನ್ನು ಸಹಿಸುವುದು ಮಕ್ಕಳಾಟವಾಗಿ ಬಿಡುತ್ತದೆ.

ಏಳು ತಿಂಗಳ ಮುಖ್ಯವಾದ ಧ್ಯಾನವೊಂದನ್ನು, ನಾನೊಂದು ಜೋಪಡಿಯಲ್ಲಿ ಮಾಡಿದ್ದೆ. ಅದೊಂದು ಹಳೆಯ ಮುರುಕಲು ಜೋಪಡಿಯಾಗಿತ್ತು – ನಿಮ್ಮ ಬಳಿ ಇರುವ ಅನುಪಯುಕ್ತ ಉಪಕರಣಗಳಂತೆ. ಅಲ್ಲಿ ಕಟ್ಟಿಕೊಂಡಿರುವ ಬಲೆಗಳು, ಹಾಗೂ ಜೋತುಬಿದ್ದ ದಾರಗಳು, ಜೋಪಡಿಯ ಮೇಲ್ಛಾವಣಿಗೆ ಹೊದಿಸಿದ ಹುಲ್ಲಿನ ಗರಿಗಳಿಗಿಂತ ಅಧಿಕವಾಗಿತ್ತು.

ಗೋಡೆ ಮೇಲಿನ ತೂತುಗಳು ಮಾತ್ರಾ ಅಲ್ಲಿ ಕಟ್ಟಿರುವ ಬಲೆಗಳಿಗಿಂತ ಹೆಚ್ಚಿತ್ತು ಎನ್ನಬಹುದು. ಮರದ ಹಲಗೆಗಳನ್ನು ಅಡ್ಡಾದಿಡ್ಡಿಯಾಗಿ ಒಂದರ ಮೇಲೊಂದು ಜೋಡಿಸಿ ಗೋಡೆಯನ್ನು ಮಾಡಲಾಗಿತ್ತು. ಆ ಕೆಲಸವನ್ನು ನೋಡಿದರೆ, ಯಾರೋ ಬಲವಂತಕ್ಕೆ ಅಥವಾ ಸರಿಯಾಗಿ ಕೂಲಿ ಸಿಗದಿರುವ ಕೆಲಸಗಾರನೊಬ್ಬ ಮಾಡಿದಂತಿತ್ತು. ಅಲ್ಲಿನ ಬಲೆಗಳನ್ನು ನೋಡಿದಾಗ, ಬಹಳ ಬುದ್ಧಿವಂತಿಕೆಯಿಂದ, ಬ್ರಹ್ಮಾಂಡದ ಅಸ್ತಿತ್ವದ ಬಗ್ಗೆ ಲೋಪದೋಷಗಳಿಂದ ಕೂಡಿದ ಮನುಷ್ಯನ ಮನಸ್ಸು, ತನ್ನ ಊಹಾಪೋಹಗಳನ್ನು ಹೆಣೆದು ಮಾಡಿದ ಬಲೆಯನ್ನು ನೆನಪಿಗೆ ತರುತ್ತಿತ್ತು. 

ನೀಲಿ, ಬಿಳಿ ಹಾಗೂ ಹಳದಿ ಬಣ್ಣದ ಸಾವಿರಾರು ಹೂಗಳು ಅರಳಿ ನಿಂತಿದ್ದರಿಂದ, ನೂರಾರು ಜೇನುನೊಣಗಳು, ಕಣಜಗಳು ಅಲ್ಲೆಲ್ಲಾ ಗುಯ್ ಗುಡುತ್ತಾ ಹಾರಾಡುತ್ತಿದ್ದವು. ನಾಗರಿಕತೆಯ ಪ್ರಜ್ಞೆ ಇರದ, ಚಂಚಲ ಬಬೂನ್ ಗಳು, ತಾವು ಮಾತ್ರ ಅತ್ಯಾಧುನಿಕ ರಸ ಪ್ರಜ್ಞೆಯನ್ನು ಹೊಂದಿರುವಂತೆ, ಹಳದಿ ಹೂಗಳತ್ತ ವಿಶೇಷವಾಗಿ ಆಕರ್ಷಿತವಾಗಿದ್ದವು.

ಅವಕಾಶಗಳನ್ನು ನೀಡಿದರೆ ಭಿಕ್ಷುಕನೂ ಕೂಡ ಆಯ್ಕೆ ಮಾಡಬಲ್ಲ ಎಂಬುದನ್ನು ನೀವು ಕಾಣಬಹುದು. ವಾನರಗಳು ತಮ್ಮ ಪೂರ್ವಜರ ಸಹೋದರ ಸಂಬಂಧಿ ಎಂದು ವಿಜ್ಞಾನ ಸಿದ್ಧಾಂತಗಳು ಹೇಳಿದರೂ ಸಹ, ನನಗೆ ಅವುಗಳ ಮೇಲೆ ಅಷ್ಟಾಗಿ ಗೌರವ ಮೂಡಲಿಲ್ಲ. ಏಕೆಂದರೆ, ಅವು ಭಾವೋದ್ರಿಕ್ತ ಮನಸ್ಸಿನ ಹಾಗೆ ಪುಂಡ ಮತ್ತು ಚಂಚಲ, ಹಾಗೂ ಅಸ್ಥಿರವಾಗಿ ಒಂದು ಕಡೆ ನೆಲೆ ನಿಲ್ಲದ ನಮ್ಮ ಮನಸ್ಸು, ಕೊಂಬೆಯಿಂದ ಕೊಂಬೆಗೆ ಹಾರುವ ಬಬೂನಿನಂತೆಯೇ ಅನಿಸುತ್ತದೆ. ಆದರೆ ಅವು ತುಂಬಾ ಮುದ್ದಾಗಿದ್ದವು ಹಾಗೂ ಕೊರೆಯುವ ಉಪಶೂನ್ಯ ಚಳಿಯನ್ನು ಸಹಿಸಿಕೊಳ್ಳುವ ಅದರ ದೇಹವನ್ನು ನೋಡಿ ಕೆಲವೊಮ್ಮೆ ಪ್ರಶಂಸಿಸುತ್ತಿದ್ದೆ ಕೂಡ.

ಆದರೂ ಸಹ ಮಂಗಗಳು ಈ ಸನ್ಯಾಸಿ ಮನ ಗೆಲ್ಲಲಿಲ್ಲ. ನಾನು ಬೂದು ಬಣ್ಣದ ತುಪ್ಪಳ ಇರುವ, ಕಪ್ಪಗಿನ ಮುಖದ, ಕಲ್ಲಿದ್ದಿಲಿನ ಕರಿಯ ಬಣ್ಣದ ಕೈಕಾಲಿರುವ ಮಂಗಗಳ ಬಗ್ಗೆ ಹೇಳುತ್ತಿದ್ದೇನೆ, ಪಟ್ಟಣದ ವಾನರಗಳ ಬಗ್ಗೆ ಅಲ್ಲ.

ಮಂಗಗಳಿಂದ ಜೇನಿನತ್ತ ಸಾಗಿದರೆ, ಹಲವಾರು ಬಾರಿ ಜೇನನ್ನು, ಇರುವೆಗಳನ್ನು ಹಾಗೂ ಜೇಡಗಳನ್ನು ಹತ್ತಿರದಿಂದ ಗಮನಿಸುವ ಅವಕಾಶ ಸಿಕ್ಕಿತ್ತು. ಅದರಿಂದ ಒಂದು ಕುತೂಹಲಕಾರಿ ಸಾದೃಶ್ಯ ಹೊರಹೊಮ್ಮಿತು, ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ. ಜೇನು ಹಾಗೂ ಇರುವೆಗಳು ಸದಾ ಕಾರ್ಯನಿರತವಾಗಿರುತ್ತವೆ. ಇದರಲ್ಲಿ ಜೇನು ಸ್ವಲ್ಪ ಹೆಚ್ಚು ಚಂಚಲ. ಹಸು, ಆಡು, ಅಥವಾ ಜಿಂಕೆಯ ಹಾಗೆ ಇವು ವಿಶ್ರಮಿಸುವುದನ್ನು ನಾನು ಎಂದೂ ಕಂಡಿಲ್ಲ. ಗೂಡಿನಲ್ಲಿ ಸಹ ಇವು ಝೇಂಕರಿಸುತ್ತಿರುತ್ತವೆ. ಇರುವೆ ಹಾಗೂ ಜೇನಿನಲ್ಲಿ ಒಂದು ಸಾಮಾನ್ಯ ಲಕ್ಷಣವೆಂದರೆ, ಇವೆರಡೂ ಬೇರೆ ಯಾರಿಗಾಗೋ ಕೆಲಸ ನಿರ್ವಹಿಸುತ್ತವೆ – ಅವರವರ ರಾಣಿಯರಿಗಾಗಿ, ಹಾಗೂ ಇವೆರಡೂ ವಸಾಹತುಶಾಹಿಯಲ್ಲಿ (colonized settings) ಜೀವಿಸುತ್ತವೆ.

ಹಾಗೆಯೇ ಇನ್ನೊಂದು ಪ್ರಮುಖ ಗಮನಾರ್ಹ ಅಂಶವೆಂದರೆ, ಇವೆರಡೂ ಸಂಗ್ರಹಿಸುವುದರಲ್ಲಿಯೇ ಕಾರ್ಯನಿರತವಾಗಿರುತ್ತವೆ. ಏಕೆಂದರೆ, ಪ್ರಾಯಶಃ ಅವು ಬೇರೆಯವರಿಗಾಗಿ ಕೆಲಸ ಮಾಡುತ್ತವೆ. ಅವುಗಳ ರಾಣಿ, ಬಹಳ ಕಡಿಮೆಗೆ ಇವರನ್ನು ಜೀವನಪರ್ಯಂತ ಸೇವಕರನ್ನಾಗಿಸಿ ದುಡಿಸಿಕೊಳ್ಳುತ್ತಾಳೆ. ಜೇನುಗಳೂ ಕೂಡ ಇದನ್ನು ಜೀವನದ ವಾಸ್ತವಿಕತೆ ಎಂದು ಒಪ್ಪಿಕೊಂಡಂತಿದೆ. ಅನ್ಯ ಸಾವಿರಾರು ಜೇನುಗಳು, ಹೀಗೆಯೇ ಕಾರ್ಮಿಕರಂತೆ ದುಡಿಯುತ್ತಿರುವಾಗ, ಇದೇ ಯೋಗ್ಯ, ಸಾಮಾಜಿಕ ಪುರಸ್ಕೃತ ,ಹಾಗೂ ಇದೇ ಸರಿಯಾದ ಕೆಲಸ ಮಾಡುವ ರೀತಿ ಎಂದೆನಿಸುವುದಿಲ್ಲವೆ – ಇದು ಸಾಮಾನ್ಯ ಮನುಷ್ಯನ ಮನೋಸ್ಥಿತಿಯನ್ನು ಪ್ರತಿಧ್ವನಿಸುತ್ತಿದೆಯಲ್ಲವೆ.

ಜೇನು ಒಂದು ಕ್ಷಣವೂ ನಿಂತು ಯೋಚಿಸಿದಂತೆ ಕಾಣುವುದಿಲ್ಲ, ಗುಂಪಿನ ಬುದ್ಧಿಮತ್ತೆ ಅನುಸಾರ ನಡೆಯುತ್ತವೆ – ಬೇರೆಯವರೆಲ್ಲಾ ಅನುಸರಿಸುವ ಮಾರ್ಗ ಸರಿ ಮಾರ್ಗವೇ ಇರಬೇಕು. ರಾಣಿ ಜೇನು ನಾನು ತಿಳಿದಂತೆ ಕೆಲಸಗಾರರಿಗಿಂತ ಸ್ವಲ್ಪ ದೊಡ್ಡ ಗಾತ್ರದಲ್ಲಿರುತ್ತದೆ, ರಾಣಿ ಜೇನಿನ ವಿಶಿಷ್ಟ ಸುಗಂಧ ಅದಕ್ಕೆ ರಾಣಿ ಸ್ಥಾನದ ಘನತೆಯನ್ನು ತಂದುಕೊಟ್ಟಿದೆ.

ನನ್ನ ಕುತೂಹಲಕಾರಿ ಸಾದೃಶ್ಯವನ್ನು ನಿಮಗೆ ತಿಳಿಸುವ ಮುನ್ನ, ನಿಮ್ಮ ಗಮನವನ್ನು ಜೇಡರ ಜೀವನ ಶೈಲಿಯ ಬಗ್ಗೆ ಹರಿಸಲು ಇಚ್ಚಿಸುತ್ತೇನೆ.

ಜೇಡ ಒಂದು ವಿಶಿಷ್ಟ ಮತ್ತು ಸ್ವತಂತ್ರ ನಿರ್ವಾಹಕ. ಅದು ತನ್ನ ಆಹಾರಕ್ಕಾಗಿ ಝೇಂಕರಿಸುವುದೂ ಇಲ್ಲ ಅಥವಾ ಅಲ್ಲಾಡುವುದೂ ಇಲ್ಲ. ತನ್ನದು ಸಹಜವಾದ ಬುದ್ಧಿವಂತಿಕೆಯೆನ್ನುವಂತೆ ಒಂದು ಜಾಗವನ್ನು ಆಯ್ದುಕೊಳ್ಳುತ್ತದೆ, ನಂತರ ಸದ್ದಿಲ್ಲದೆ ತನ್ನ ಕೆಲಸವನ್ನು ಶುರು ಮಾಡುತ್ತದೆ. ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಲೆಯನ್ನು ಹೆಣೆಯುತ್ತದೆ ಹಾಗೂ ತಾಳ್ಮೆಯಿಂದ ಕಾಯುತ್ತದೆ. ಬಲೆಯೊಳಗೆ ಅಥವಾ ಮೇಲೆ, ಅನೇಕ ವೇಳೆ ಬಲೆಯಿಂದ ಹೊರಗೆ ನಿಂತು ಕೂಡ ಕಾಯುತ್ತದೆ. ಚಡಪಡಿಕೆಯಿಂದಿರುವ ಜೇಡನನ್ನು ನಾನು ಇಲ್ಲಿಯವರೆಗೂ ಕಂಡಿಲ್ಲ. ಅದು ಪ್ರಸ್ತುತದಲ್ಲಿ ಜೀವಿಸುತ್ತದೆ. ಹಾಗೂ ಅದು ಎಂದೂ ವಸಾಹತುವಿನಲ್ಲಿ ಅಥವಾ ನಿಕೃಷ್ಟ ದಾಸ್ಯದಲ್ಲಿ ಜೀವಿಸುವುದಿಲ್ಲ. ಅದು ನಂಬಿಕೆಯ ಮೇಲೆ ಜೀವಿಸುತ್ತದೆ, ಆದರೆ ಕುರುಡು ನಂಬಿಕೆಯಿಂದಲ್ಲ. ಬಲೆಯಲ್ಲಿ ದಿನಗಟ್ಟಲೆ ಯಾವುದೇ ಬೇಟೆ ಸಿಕ್ಕಿಬೀಳದಿದ್ದರೆ ಅದು ಹೊಸ ಬಲೆ ಹೆಣೆಯುವುದನ್ನು ಗಮನಿಸಿದ್ದೇನೆ.

ಹೆಚ್ಚಾಗಿ ಶ್ರಮಿಸದೇ ಕೆಲಸ ಮಾಡುವ ಸಮರ್ಥ ಕೆಲಸಗಾರನಂತೆ ತನ್ನ ಕೆಲಸವನ್ನು ಮಾಡುತ್ತದೆ. ಕೆಲವು ಜೀವಿಗಳು ಬಲೆಯತ್ತ ಹಾರಿಬಂದು ಸಿಕ್ಕಿಹಾಕಿಕೊಳ್ಳುತ್ತದೆ; ಜೇಡ ತಕ್ಷಣ ಚಲಿಸಲು ಶುರುಮಾಡುತ್ತದೆ. ಈಗ, ಅದು ಇಲಿಗಳ ಹಾಗೆ ಚುರುಕು, ಹಾಗೂ ಜಾಗರೂಕ. ತನ್ನ ಬೇಟೆಯ ಕತ್ತನ್ನು ಹಿಸುಕಿ ಸಾಯಿಸಿ, ಹೊಟ್ಟೆ ತುಂಬಾ ತಿನ್ನುತ್ತದೆ. ಹಾಗೇ ವೇಳೆ ಸರಿದಂತೆ, ವಿಧಿ ತಾಜಾ ಆಹಾರವನ್ನು ದಿನಂಪ್ರತಿ ಅದರ ‘ಬಲೆಯ ಬುಡಕ್ಕೆ’ ತಂದೊಪ್ಪಿಸುತ್ತಲೇ ಇರುತ್ತದೆ. ಒಬ್ಬ ಉತ್ಕೃಷ್ಟ ಭಕ್ತನ ಹಾಗೆ, ಜೇಡ ಕೂಡ ಸರಿಯಾದ ಕರ್ಮ ಮಾಡುವುದನ್ನು ಹಾಗೂ ಸಂಪೂರ್ಣ ಶರಣಾಗತಿಯಲ್ಲಿ ಜೀವಿಸುವುದನ್ನು ಕಲಿತಂತಿದೆ. ತನ್ನ ಬಳಿ ಆಹಾರ ಬಂದೇ ಬರುತ್ತದೆ ಎಂಬ ನಂಬಿಕೆಯಲ್ಲಿ ಜೀವಿಸುತ್ತದೆ, ಎಲ್ಲಾ ಕರ್ಮಕ್ಕೂ ಅಂತಿಮವಾಗಿ ಫಲ ಸಿಕ್ಕೇ ಸಿಗುತ್ತದೆ ಎಂಬುದನ್ನು ಅರಿತಂತಿದೆ.

ಹಾಗಾಗೀ, ನೀವು ಜೇಡರಾಗುತ್ತೀರೋ ಅಥವಾ ಜೇನೋ, ಆಯ್ಕೆ ನಿಮ್ಮದು. ನಿಮ್ಮ ಕೆಲಸದ ರೀತಿಯಂತೆ ಭೌತಿಕ ಪ್ರಪಂಚದಲ್ಲಿ ಫಲ ದೊರೆಯುತ್ತದೆ. ಆದರೆ ಇಲ್ಲಿ ನನ್ನ ದೃಷ್ಟಿ ಆಧ್ಯಾತ್ಮಿಕ ಉನ್ನತಿಯತ್ತ ಇದೆ.

ನಿಮ್ಮ ಮನಸ್ಸೇ ರಾಣಿ ಜೇನು. ನೀವು ನಿಮ್ಮ ಮನಸ್ಸಿಗಾಗಿ ಕೆಲಸ ಮಾಡುತ್ತಾ ಇದ್ದರೆ, ಅದರ ಆಯ್ಕೆ ನಿಮಗೇ ಗಂಡಾಂತರ ತಂದುಕೊಡುತ್ತದೆ. ಅದು ನಿಮ್ಮನ್ನು ಅನಾವಶ್ಯಕ ನಿರಂತರ ದುಡಿಮೆಯಲ್ಲಿ ತೊಡಗಿಸುತ್ತದೆ, ಅದೂ, ಕೇವಲ ತೊಟ್ಟು ಹನಿಗಾಗಿ, ಮತ್ತು ನೀವು ಜೋರಾಗಿ ಹಾರಾಡುತ್ತಾ, ಜೀವನದ ಕೊನೆಯುಸಿರಿನ ತನಕ ಚಡಪಡಿಕೆಯಿಂದ ಕುಪ್ಪಳಿಸುತ್ತಾ ಇರುತ್ತೀರಿ.

ನಿಮಗೂ ಜೇನಿನ ಹಾಗೆ, ಯಾವ ಹೂವಿನ ಪರಾಗದಿಂದ ರಸವನ್ನು ಹಿಂಡುತ್ತದೆಯೋ ಆ ಹೂವಿನ ಸುಗಂಧವನ್ನು ಮಾತ್ರಾ ಆನಂದಿಸಬಹುದೇ ವಿನಃ ಅದರ ತುಪ್ಪದಲ್ಲಿ ಪಾಲುಗಾರಿಕೆ ಇರುವುದಿಲ್ಲ. ಜೇನು ಗೂಡಿನಲ್ಲಿರುವ ಜೇನುತುಪ್ಪ, ರಾಣಿ ಜೇನಿಗೂ(ಮನಸ್ಸು) ಸಹ ಹೆಚ್ಚಾಗುತ್ತದೆ. ಮುಂದೊಂದು ದಿನ ಅದೆಲ್ಲಾ ಜೇನುಸಾಕಣೆಯ ಪಾಲಾಗುತ್ತದೆ. ನೀವು ರಾಣಿಗಾಗಿ ದುಡಿಯಬೇಡಿ. ಕ್ರಾಂತಿ ಶುರು ಮಾಡುವುದೇನೋ ಭಾವನಾತ್ಮಕ ಪ್ರತಿಕ್ರಿಯೆ ಇರಬಹುದು. ಆದರೆ, ಕ್ರಾಂತಿಕಾರಿಯಾಗಿ ಉಳಿಯುವುದಕ್ಕೆ ಭಾರಿ ಪ್ರಯತ್ನ ಹಾಗೂ, ಬುದ್ಧಿವಂತಿಕೆ ಬೇಕು. ಅದರಲ್ಲಿ ಗೆಲ್ಲುವುದಕ್ಕೆ ಮೇಲೆ ಹೇಳಿದ್ದೆಲ್ಲಾ ಮಾಡಬೇಕು ಹಾಗೂ ಜೊತೆಗೆ ಅಸಾಧಾರಣ ಛಲ, ದೃಢತೆ ಮತ್ತು ಶಿಸ್ತು ಕೂಡ ಬೇಕು.

ಚಡಪಡಿಕೆ ಹಾಗೂ ಅಸಡ್ಡೆಯಿಂದ ಕೂಡಿದ ಜೇನಿನ ಜೀವನಶೈಲಿಯ ವಿರುದ್ಧ ದಂಗೆ ಏಳುವುದಿದ್ದರೆ, ನಿಮ್ಮ ಜೀವನದ ಕೊನೆಯ ತನಕ ನಿರಂತರವಾಗಿ ಪ್ರಯತ್ನಿಸಲು ತಯಾರಾಗಿರಿ; ನಿಮ್ಮ ಕೆಲಸ ದೈತ್ಯವಾದುದು – ಈ ಗದ್ದಲದ ಜೀವನದಲ್ಲಿ ಶಾಂತಿಯನ್ನು ಹುಡುಕುವುದು ಹಾಗೂ ರಾಣಿ ಜೇನನ್ನು ನಿಮ್ಮ ವಿಧೇಯ ಸೇವಕನನ್ನಾಗಿ ಪರಿವರ್ತಿಸಿಕೊಳ್ಳುವುದು. ಆದರೆ ಮಾಡಲು ಸಾಧ್ಯವಿದೆ. ಮನಸ್ಸಿನ ಸ್ಥಿರತೆಯು ನಿಮ್ಮನ್ನು ಅಸಾಧಾರಣವಾಗಿಸುತ್ತದೆ. ಹಾಗೂ, ಸ್ಥಿರವಾದ ನೈತಿಕತೆ ನಿಮಗೆ ಒಂದು ಸುಗಂಧವನ್ನು ನೀಡುತ್ತದೆ. ಅದರಿಂದ ಕೇವಲ ರಾಣಿ ಜೇನಷ್ಟೇ ಅಲ್ಲ, ನಿಮ್ಮತ್ತ ದೃಷ್ಟಿ ಹಾಯಿಸುವ ಎಲ್ಲಾ ರೀತಿಯ ಜೀವಿಗಳನ್ನೂ ಆ ಸುಗಂಧ ಹುಚ್ಚೆಬ್ಬಿಸುತ್ತದೆ.

ಸಿಂಹಕ್ಕಿಂತ ಹಾವು ಸಾವಿರ ಪಟ್ಟು ಹೆಚ್ಚು ಮಾರಕವಾಗಿರಬಹುದು, ಆದರೆ ಸಿಂಹದ ಠೀವಿ ಹಾಗೂ ಅದರ ಕಾರ್ಯ ರೀತಿ ಸಿಂಹಕ್ಕೆ ರಾಜ ಕಿರೀಟವನ್ನು ಕೊಟ್ಟಿದೆ; ತನ್ನ ಹಸಿವಿಗಾಗಿ ಬಿಟ್ಟರೆ ಅದು ಸಾಮಾನ್ಯ ಸಂದರ್ಭದಲ್ಲಿ ಬೇಟೆಯಾಡಿ ಕೊಲ್ಲುವುದಿಲ್ಲ.

ನೀವು ಕ್ರಾಂತಿಕಾರಿ ರೀತಿಯವರಿಲ್ಲದಿದ್ದರೆ, ಜೇಡನ ರೀತಿ ವಿಧೇಯನಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಜೇನಾಗಿ, ಜೀವನ ನಡೆಸಲು, ನಿರಂತರ ಹೋರಾಟದ ಅವಶ್ಯಕತೆ ಇದ್ದರೆ, ಜೇನಿನಿಂದ ಜೇಡನಾಗುವುದು ಪುನರ್ಜನ್ಮದಂತೆ. ಜನಜಂಗುಳಿಯ ಜೀವನದ ಮಧ್ಯೆ ನೀವು ಏಕಾಂತತೆಯಲ್ಲಿ ನೆಮ್ಮದಿಯಾಗಿ ಜೀವಿಸುವುದನ್ನು ಕಲಿಯಬೇಕು. ಸದಾ ಸರಿಯಾದ ಕರ್ಮವನ್ನು ಮಾಡುತ್ತಾ, ಅತ್ಯಂತ ಶ್ರದ್ಧೆ ಹಾಗೂ ಸಂಪೂರ್ಣ ಶರಣಾಗತಿಯನ್ನು ಬೆಳೆಸಿಕೊಳ್ಳಬೇಕು.

ನೀವು ಅಲ್ಲಿಂದಿಲ್ಲಿ ಕುಪ್ಪಳಿಸುವುದನ್ನು ಬಿಟ್ಟು, ನಿಮ್ಮ ಭಗವಂತನ ಭಾವದಲ್ಲಿ ತದೇಕದಿಂದ ತಲ್ಲೀನರಾಗುವುದನ್ನು ಕಲಿಯಿರಿ. ನೀವು ಮಾಡಬೇಕಾದದ್ದನ್ನೆಲ್ಲಾ ಮಾಡಿ. ಆದರೆ, ಅದರ ನಿರರ್ಥಕತೆ ಅಥವಾ ಫಲವನ್ನು ನಿಮ್ಮ ದೇವರ ಮೇಲೆ ಬಿಟ್ಟು ಬಿಡಿ. ಜೇನುತುಪ್ಪ ಅಥವಾ ಹೂವಿನ ಸುಗಂಧದಿಂದ ಸಿಗುವ ತಾತ್ಕಾಲಿಕ ಸಂತೋಷದಲ್ಲಿ ನಿಮಗೆ ಯಾವುದೇ ಆಸಕ್ತಿ ಇಲ್ಲದಿರಲಿ. ಜೇಡ ಹೇಗೆ ತನ್ನ ಆಹಾರದ ಬೇಟೆಯ ಉದ್ದೇಶದಿಂದೊಂದೇ ಬಲೆಯನ್ನು ನೇಯ್ಯುತ್ತದೆಯೋ, ಹಾಗೆಯೇ, ನೀವು ನಿಮ್ಮ ಎಲ್ಲಾ ಕೆಲಸಗಳನ್ನೂ ನಿಮ್ಮ ಇಷ್ಟ ದೇವರನ್ನು ನೋಡುವ ಒಂದೇ ಉದ್ದೇಶದಿಂದ ಮಾಡಿರಿ.

ಜೇಡ ಸದಾ ತನ್ನ ಭಾವವನ್ನು ಬೇಟೆಯತ್ತ ಏಕಾಗ್ರಗೊಳಿಸಿರುತ್ತದೆ – ಗೋಡೆಯ ಮೇಲೆ ಕಾಯುತ್ತ ಕುಳಿತಿರುತ್ತದೆ. ತನ್ನ ಬಲೆಯಲ್ಲಿ ಏನಾದರೂ ಸಿಕ್ಕಿ ಬಿದ್ದರೆ ಒಂದು ಕ್ಷಣವೂ ಹಿಂಜರಿಯದೆ ಅದರತ್ತ ಸರಿಯುತ್ತದೆ; ನೀವೂ ಸಹ ಒಬ್ಬ ನಿಷ್ಠಾವಂತ ಭಕ್ತನಂತೆ, ಭಕ್ತಿ ಭಾವದಲ್ಲಿ ನೆಲೆಸಿ, ಸಿಗುವ ಪ್ರತಿಯೊಂದು ಅವಕಾಶವನ್ನೂ ನಿಮ್ಮ ಭಗವಂತನ ಸೇವೆ ಸಲ್ಲಿಸುವುದಕ್ಕೆಂದೇ ಉಪಯೋಗಿಸಿ. ದೇವರ ಸೇವೆಯ ಯಾವ ಅವಕಾಶವೂ ಕೈತಪ್ಪಿಹೋಗದಂತೆ ನೋಡಿಕೊಳ್ಳಲು, ಸಂಪೂರ್ಣ ಗಮನದಿಂದರಬೇಕಾಗುತ್ತದೆ. ಜೇಡನಷ್ಟು ಸರಿಸಮ ಶರಣಾಗತಿ ಇದ್ದರೆ, ದೇವರು ನಿಮ್ಮನ್ನು ತಪ್ಪದೇ ನೋಡಿಕೊಳ್ಳುತ್ತಾನೆ.

ಬೇರೆ ರೀತಿ ಹೇಳಬೇಕೆಂದರೆ, ನೀವು ದೇವರ ಕೃಪೆಗೆ ಅರ್ಹರಾಗುತ್ತೀರಿ. ಜೇಡ ತನ್ನ ಬಲೆಯಲ್ಲಿ ತಾನೇ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಹಾಗೆಯೇ, ಆತ್ಮಸಾಕ್ಷಾತ್ಕಾರ ಹೊಂದಿರುವ ವ್ಯಕ್ತಿ ಪ್ರಪಂಚದ ಎಳೆಯಲ್ಲಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಜೇಡನಂತೆ ಅವನೂ ಅರ್ಥ ಮಾಡಿಕೊಂಡಿರುತ್ತಾನೆ, ಬಲೆ ರಚಿಸಿರುವುದು ಆಹಾರವನ್ನು ಹಿಡಿಯುವುದಕ್ಕೆ, ಹಾಗೂ, ತಾನು ಎಚ್ಚರಿಕೆಯಿಂದ ಇಲ್ಲದಿದ್ದರೆ ಒಂದಲ್ಲ ಒಂದು ದಿನ ತಾನೇ ಆಹಾರವಾಗಬಹುದು ಎಂದು. ಹಲ್ಲುಗಳ ಮಧ್ಯೆ ಇರುವ ನಾಲಿಗೆಯ ಹಾಗೆ, ರಸವನ್ನು ಆಸ್ವಾದಿಸುತ್ತಾ, ಹಲ್ಲುಗಳಿಗೆ ಸಿಕ್ಕಿ ಹಾಕಿಕೊಳ್ಳದಂತೆ ಅವನು ಜೀವಿಸುತ್ತಾನೆ.

ಜೇನುಗೂಡು ಜೇನಿನದ್ದು, ಬಲೆ ಜೇಡನದ್ದು – ಹಾಗೇ, ನಿಮ್ಮ ಜೀವನ ನಿಮ್ಮ ರಚನೆ. ಹೂಗಳಿಂದ ಮಕರಂದವನ್ನು ಸಂಗ್ರಹಿಸಿರುವಿರಿ, ನಿಮ್ಮದೇ ಆದ ಗೂಡನ್ನು ಕಟ್ಟಲು ನೀವು ತುಂಬಾ ಪರಿಶ್ರಮವಹಿಸಿದ್ದೀರಿ. ಕೆಲವೊಮ್ಮೆ ನಿಮ್ಮ ಉಗುಳುನುಂಗಿ ನಿಮ್ಮ ಪ್ರಪಂಚವನ್ನು ಹೆಣಿದಿದ್ದೀರಿ. ಜೇಡನ ಹಾಗೆ ಬಲೆಯನ್ನು ಸುತ್ತುತ್ತಾ ಕಟ್ಟುವುದರ ಬದಲು, ಕೆಲವೊಮ್ಮೆಯಾದರೂ ಅದನ್ನು ನಿಲ್ಲಿಸಿ, ವಿಮರ್ಶಾತ್ಮಕವಾಗಿ ಪರೀಕ್ಷಿಸಿ, ವಿಶ್ಲೇಷಿಸಿ. ನಿಮ್ಮ ಕೆಲಸಕ್ಕೆ ಒಂದು ಪ್ರಾಧ್ಯಾನತೆಯನ್ನು ನೀಡಿ. ಜೇಡನಾಗಲಿ ಅಥವಾ ಬೇಟೆಯಾಗಲಿ, ಬಲೆಯಲ್ಲಿ ಸಿಕ್ಕಿ ಹಾಕಿಕೊಂಡರೆ, ಎದುರುಗೊಳ್ಳುವುದು ಸಂಕಟ ಹಾಗೂ ಒದ್ದಾಟ ಮಾತ್ರ.

ಹೋಗಿ ಆನಂದಿಸಿರಿ! ನಿಮ್ಮಲ್ಲಿರುವ ಅಮೃತವನ್ನು ಹೀರುವುದನ್ನು ಕಲಿಯುವ ತನಕ, ಹೂವಿನ ಮಕರಂದವನ್ನು ನಿರಾಸಕ್ತಿಯಿಂದ ಹೀರುವುದನ್ನು ಕಲಿಯಿರಿ. ನಿಮ್ಮದೇ ಬಲೆಯನ್ನು ಹೆಣೆಯುವ, ಪಟ್ಟುಬಿಡದ ಶ್ರಮದಲ್ಲಿ, ಅದೇ ನಿಮಗೆ ಬಲೆಯಾಗಿ ಬಿಡುವಷ್ಟು ಸಂಕೀರ್ಣವಾಗಿ ರಚಿಸಬೇಡಿ. ನೀವು ಇನ್ನೂ ಉತ್ತಮವಾದುದ್ದಕ್ಕೆ ಸೂಕ್ತರು. 

ಶಾಂತಿ.

ಸ್ವಾಮಿ

Translated from: The Two Spiritual Approaches 

Painting inspiration (copied from 😛) https://in.pinterest.com/pin/68737928382/