ನನ್ನನು ಸಂಪರ್ಕಿಸುವುದು ಹೇಗೆ, ಹಾಗೂ ಆಶ್ರಮದ ಯೋಜನೆಗಳಿಗೆ ಸಹಾಯಕವಾಗುವುದು ಹೇಗೆ ಎಂದು ಕೆಲವರು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಈ ಕತೆಯನ್ನು ಕೇಳಿ, ಇದನ್ನು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮಕ್ಕಳ ಪುಸ್ತಕದಲ್ಲಿ ಓದಿದ್ದೆ.

ಒಬ್ಬ ಗುರು ಮತ್ತು ಅವನ ಶಿಷ್ಯ – ದೀಕ್ಷಿತ ಶಿಷ್ಯ – ಒಂದು ಹಳ್ಳಿಯ ಹೊರವಲಯದಲ್ಲಿ ಆನಂದದಿಂದ ಜೀವಿಸುತ್ತಿದ್ದರು. ಶಿಷ್ಯನ ಶಿಕ್ಷಣ ಮುಗಿದ ಮೇಲೆ, ಗುರು ತನ್ನ ಏಕಾಂತದ ತಪಸ್ಸಿಗಾಗಿ ದೂರ ಹೋಗಲು ನಿಶ್ಚಯಿಸಿದ. ಶಿಷ್ಯನಿಗೆ ತನ್ನ ನಿರ್ಧಾರದ ಬಗ್ಗೆ ತಿಳಿಸಿದ. ಅವನಿಗೆ ಸನ್ಯಾಸ ಪ್ರತಿಜ್ಞೆಯ ನೀತಿ ಸಂಹಿತೆಗಳನ್ನು ನೆನಪಿಸಿ, ತನ್ನ ನಿತ್ಯ ಕರ್ಮಗಳಲ್ಲಿ ದೃಢವಾಗಿ ನಿಲ್ಲುವಂತೆ ಸೂಚಿಸಿದ.

ಶಿಷ್ಯನಿಗೆ ವಿದಾಯ ಹೇಳಿ, ಗುರು ತನ್ನ ಗಮ್ಯದತ್ತ ಹೊರಟ. ಶಿಷ್ಯನು ಕನಿಷ್ಠ ಸಾಮಗ್ರಿಗಳೊಂದಿಗೆ, ಪ್ರಾಮಾಣಿಕತೆಯಿಂದ ಜೀವನ ನಡೆಸಲು ಆರಂಭಿಸಿದ. ಅಡುಗೆ ಮಾಡುವ ಪಾತ್ರೆಗಳು ಒಂದೆರಡು, ಒಂದು ಭಿಕ್ಷೆ ಬೇಡುವ ಪಾತ್ರೆ, ಎರಡು ಜೊತೆ ಕಾವಿ ಬಟ್ಟೆ, ಹಾಗೂ ಎರಡು ಲಂಗೋಟಿ, ಇವಿಷ್ಟೇ ತನ್ನೊಟ್ಟಿಗಿದ್ದ ಸಾಮಗ್ರಿಗಳು. ದಿನಗಳು ಉರುಳಿದವು, ಒಂದು ದಿನ ಇಲಿಗಳು ಹರಿದು ಚಿಂದಿ ಮಾಡಿಬಿಟ್ಟಿದ್ದ ತನ್ನ ಲಂಗೋಟಿಯನ್ನು ನೋಡಿ ವಿಚಲಿತನಾದ. ಅಂದು ಬಿಕ್ಷೆ ಬೇಡಲು ಹೋದಾಗ, ಹಳ್ಳಿಯವನಿಂದ ಒಂದು ತುಂಡು ಬಟ್ಟೆಯನ್ನು ಕೇಳಿ ಲಂಗೋಟಿ ಮಾಡಿಕೊಂಡ. ಆದರೆ, ಪುನಃ ಮರುದಿನ ಇಲಿಗಳು ಲಂಗೋಟಿಯನ್ನು ಹರಿದು ಚೂರು ಮಾಡಿಬಿಟ್ಟಿದ್ದವು.

ತುಂಡು ಬಟ್ಟೆಯನ್ನು ಇನ್ನೊಮ್ಮೆ ಬೇಡುವುದಕ್ಕೆ ಶಿಷ್ಯನಿಗೆ ಸಂಕೋಚವೆನಿಸಿತು. ಆದರೆ ವಿಧಿ ಇಲ್ಲ. ಆ ಹಳ್ಳಿಯವನನ್ನು ಮತ್ತೆ ಬೇಡುತ್ತಾನೆ. ಅಗತ್ಯಗಳು ಹೇಗೆ ಆತ್ಮಗೌರವವನ್ನು ನಿಗ್ರಹಿಸುತ್ತದೆಯೋ ಹಾಗೆಯೇ ಕಾಮಾಸಕ್ತಿಯು ನೈತಿಕತೆಯನ್ನೂ ಹಾಗೂ ಬುದ್ಧಿಶಕ್ತಿಯನ್ನೂ ನಿಗ್ರಹಿಸುತ್ತದೆ. ಇಲಿಗಳ ಕಾಟವನ್ನು ತೊಡೆದುಹಾಕಲು ಬೆಕ್ಕೊಂದನ್ನು ಸಾಕುವಂತೆ ಹಳ್ಳಿಯವನೊಬ್ಬ ಶಿಷ್ಯನಿಗೆ ಸಲಹೆ ನೀಡುತ್ತಾನೆ. ಇದೊಂದು ಒಳ್ಳೆಯ ಸಲಹೆ ಎಂದು ಶಿಷ್ಯ ಯೋಚಿಸುತ್ತಾನೆ. ಅದೇ ದಿನ ಬೆಕ್ಕೊಂದನ್ನು ಮನೆಗೆ ಒಯ್ಯುತ್ತಾನೆ, ಹಾಗೂ ನೋಡ ನೋಡುತ್ತಿದ್ದಂತೆಯೇ ಇಲಿಗಳೆಲ್ಲಾ ಮಂಗ ಮಾಯವಾಗಿಬಿಡುತ್ತದೆ, ಅವು ಎಂದೂ ಇದ್ದೇ ಇರಲಿಲ್ಲವೇನೋ ಎಂಬಂತೆ – ಭೌತಿಕ ಗಳಿಕೆಯಂತೆ.

ಒಂದಷ್ಟು ದಿನ ನೆಮ್ಮದಿಯಾಗಿ ಕಳೆಯಿತು. ಈಗ ಶಿಷ್ಯನ ಮುಂದೆ ಮತ್ತೊಂದು ಸವಾಲು ಎದುರಾಯಿತು. ನಿಜವಾಗಿಯೂ ಭೌತಿಕ ಪ್ರಪಂಚದ ಸ್ವಭಾವವೇ ಹಾಗೆ: ಅಷ್ಟೊಂದು ತಾತ್ಕಾಲಿಕ ಹಾಗೂ ಅಸ್ಥಿರ. ಈಗ ಆ ಬೆಕ್ಕಿಗೆ ಆಹಾರವನ್ನು ಒದಗಿಸಬೇಕಾಗಿದೆ. ಹಾಗಾಗಿ, ಹೆಚ್ಚು ಆಹಾರವನ್ನು ಭಿಕ್ಷೆ ಬೇಡಿ ತರಬೇಕು. ಮತ್ತೊಬ್ಬ ಬುದ್ಧಿವಂತ, ಹಸುವನ್ನು ಸಾಕಲು ಸಲಹೆ ನೀಡಿದ. ಹಸುವನ್ನು ಸಾಕುವುದರಿಂದ ಬೆಕ್ಕಿಗೂ ಹಾಲು ಸಿಗುತ್ತದೆ, ಹಾಗೂ ಸನ್ಯಾಸಿಯೂ ಕೂಡ ಅದನ್ನು ಬಳಸಬಹುದು ಎಂಬುದು ಅವನ ವಿಚಾರ. ಒಬ್ಬ ಉದಾತ್ತ ಹೃದಯಿ ಹಸುವೊಂದನ್ನು ದಾನ ನೀಡಿದ. ಇನ್ನು ಮುಂದೆ ತನಗೆ ಸಿಗುವ ಹಾಲು, ಮೊಸರು, ತುಪ್ಪದ ಬಗ್ಗೆ ಯೋಚಿಸಿ ಶಿಷ್ಯ ಭಾವಪರವಶನಾದ.

ದಿನಗಳು ಕಳೆದವು; ಈಗ ಶಿಷ್ಯನ ಬಳಿ, ಗುಡಿಸಲು, ಬೆಕ್ಕು, ದನ ಹಾಗೂ ಅದಕ್ಕೆ ಕೊಟ್ಟಿಗೆ ಸಹಾ ಆಗಿದೆ. ಅವನ ಲಂಗೋಟಿಯೂ ಕೂಡ ಸುರಕ್ಷಿತವಾಗಿದೆ. ಹಾಲು ಕರೆಯುವುದು, ಹಸುವಿನ ಮೈ ತೊಳೆಯುವುದು, ಕೊಟ್ಟಿಗೆ ಶುಚಿ ಮಾಡುವುದು, ಹಸುವಿಗೆ ಮೇವು ಹಾಕುವುದು, ದಿನದ ಸಮಯವೆಲ್ಲಾ ಹೀಗೆಯೇ ಕಳೆಯುತ್ತಿದೆ. ಆಧ್ಯಾತ್ಮಿಕ ಸಾಧನೆಗೆ ಸಮಯವೇ ಸಿಗುತ್ತಿಲ್ಲ. ಯೋಚಿಸಿದ, ತಾನು ಸನ್ಯಾಸಿ ಆಗದಿದ್ದರೆ ಲಂಗೋಟಿಯ ಅವಶ್ಯಕತೆಯೇ ಇರುತ್ತಿರಲಿಲ್ಲ. ಈ ತನ್ನ ಸಂಕಟದ ಪರಿಹಾರಕ್ಕಾಗಿ ಹಳ್ಳಿಯ ಗೃಹಸ್ಥನೊಬ್ಬನ ಬಳಿ ಹೋದ.

ತಲೆ ಹಣ್ಣಾದ, ಆ ಬುದ್ಧಿವಂತ ಗೃಹಸ್ಥನಿಗೆ ಮದುವೆ ವಯಸ್ಸಿನ ಮಗಳಿದ್ದಳು. ಸರಳ ಹಾಗೂ ಗುಣವಂತ ಸನ್ಯಾಸಿಯನ್ನು ನೋಡಿ, ತನ್ನ ಮಗಳ ಕೈಹಿಡಿಯಲು ಸೂಚಿಸಿದ. ಸನ್ಯಾಸಿಗೆ ಅದರಲ್ಲಿ ತೊಂದರೆ ಏನೂ ಕಾಣಲಿಲ್ಲ, ಹಾಗೂ ಅದರಿಂದ ಅನುಕೂಲಗಳೇ ಜಾಸ್ತಿ ಎನಿಸಿ, ಒಪ್ಪಿಗೆ ನೀಡಿದ; ಬಹಳ ಸಹಜವಾದ ಪ್ರತಿಕ್ರಿಯೆ. ಹತಾಶೆಯಲ್ಲಿರುವಾಗ ಯೋಚನಾಶಕ್ತಿಗೆ ಮಂಕು ಕವಿದಿರುತ್ತದೆ, ಹಾಗೂ ಆಗ ಎಲ್ಲವೂ ಸರಿಯೆನಿಸುತ್ತದೆ ಕೂಡ.

ಹೆಂಡತಿಯಾಗಿ ಬಂದವಳು ತುಂಬಾ ಸದ್ಗುಣಿಯಾಗಿದ್ದಳು. ಅವರಿಬ್ಬರೂ ಸಂತೋಷವಾಗಿ ಜೀವನ ನಡೆಸಲು ಶುರುಮಾಡಿದರು. ಶಿಷ್ಯನಿಗೆ ಈಗ ಎಲ್ಲವೂ ಸರಾಗವಾಗಿದೆ. ಅವನ ದೈನಂದಿಕ ಬೇಕು-ಬೇಡಗಳನ್ನು ನಿಷ್ಠಾವಂತ ಹಾಗೂ ಕುಶಲ ಹೆಂಡತಿ ಪೂರೈಸುತ್ತಿದ್ದಾಳೆ. ಅವಳು ಹಸುಗಳಿಗಾಗಿ ಗುಡಿಸಿಲಿನ ಸುತ್ತಮುತ್ತಲಿನ ಜಾಗವನ್ನು ಖರೀದಿಸಲು ಗಂಡನಿಗೆ ಪ್ರೋತ್ಸಾಹಿಸಿದಳು. ಇದರಿಂದ ಹೆಚ್ಚು ಮೇವು, ಹಾಗೂ ಹಾಲು ಮಾರಾಟಕ್ಕೆ ಅನುಕೂಲವಾಗುತ್ತದೆ, ಹಾಗೂ ಇನ್ನೂ ಹೆಚ್ಚು ಹಣವನ್ನು ಉಳಿಸಬಹುದು ಎಂದು. ಕುಟುಂಬಕ್ಕೆ ಸ್ವಾಭಾವಿಕವಾಗಿ ಒಂದೆರಡು ಮಕ್ಕಳು ಕೂಡ ಸೇರ್ಪಡೆಯಾದವು.

ಶಿಷ್ಯನಿಗೀಗ ಹಣ ಮಾಡುವುದು ಹಾಗೂ ತಳುಕು ಬಳುಕಿನ ಜೀವನ ಹೆಚ್ಚು ಆಕರ್ಷಕವಾಗಿ ಕಾಣತೊಡಗಿದೆ. ಹಾಗಾಗಿ, ಆಧ್ಯಾತ್ಮಿಕ ಸಾಧನೆಯನ್ನು ರಾಜಿ ಮಾಡಿಕೊಂಡಿದ್ದಾನೆ. ಅಲ್ಲೊಮ್ಮೆ, ಇಲ್ಲೊಮ್ಮೆ ತನ್ನ ಗುರು ನೆನಪಾಗಿ, ಭೌತಿಕ ಜೀವನಕ್ಕಾಗಿ ಸನ್ಯಾಸ ಪ್ರತಿಜ್ಞೆಯನ್ನು ತೊರೆದುದಕ್ಕಾಗಿ ಅಪರಾಧ ಪ್ರಜ್ಞೆ ಕಾಡುತ್ತದೆ. ಆದರೆ, ಯೌವನ ಹಾಗೂ ಹಣದ ಹರಿವಿರುವಾಗ ಭೌತಿಕ ಜೀವನ ಜೀವಿಸುವುದೇ ಯೋಗ್ಯವೆನಿಸುತ್ತದೆ.

ಹನ್ನೆರಡು ವರ್ಷಗಳ ತಪಸ್ಸಿನ ನಂತರ, ಗುರು ಒಂದು ದಿನ ಹಳ್ಳಿಗೆ ಹಿಂದಿರುಗುತ್ತಾನೆ. ಮುಂಚೆ ತಾವಿದ್ದ ಜಾಗವನ್ನು ಗುರುತಿಸಲು ಕಷ್ಟವಾಗುತ್ತದೆ. ಅಲ್ಲಿ ಈಗ ಹತ್ತಾರು ಹಸುಗಳು, ಸೇವಕರು ಹಾಗೂ ಆ ಜಾಗ ಮುಂಚೆಗಿಂತ ಇಪ್ಪತ್ತರಷ್ಟು ಹೆಚ್ಚು ದೊಡ್ಡದಾಗಿ ಕಾಣುತ್ತಿದೆ.

ಗುರು ಯೋಚಿಸುತ್ತಾನೆ, ತನ್ನ ಸರಳ ಶಿಷ್ಯನನ್ನು ಯಾರೋ ವಂಚಕ, ಜಾಗ ಬಿಡಿಸಿ ಹೊರಗೋಡಿಸಿರಬೇಕೆಂದು. ಒಳಗೆ ಹೋಗಿ ತನ್ನ ದೀರ್ಘಕಾಲ ತಪಸ್ಸಿನಿಂದ ಪಡೆದ ಶಕ್ತಿಯಿಂದ ಆ ವಂಚಕನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸುತ್ತಾನೆ. ಒಳಹೊಕ್ಕ ಗುರುವಿನ, ಕೋಪದಿಂದ ಗಂಟಾದ ಹುಬ್ಬನ್ನು ಶಿಷ್ಯನ ಉದ್ದಂಡ ನಮಸ್ಕಾರ ಸ್ವಾಗತಿಸುತ್ತದೆ. ಒಬ್ಬ ಗೃಹಸ್ಥನ ಉಡುಪಿನಲ್ಲಿ ತನ್ನ ಶಿಷ್ಯನನ್ನು ನೋಡಿ, ಗುರುವಿಗೆ ತನ್ನ ಕಣ್ಣನ್ನೇ ನಂಬಲಸಾಧ್ಯವೆನಿಸುತ್ತದೆ. ತನ್ನ ಭಾವನೆಗಳನ್ನು ನುಂಗುವ ಮೊದಲೇ, ಶಿಷ್ಯ ತನ್ನ ಮೂರೂ ಮಕ್ಕಳಿಗೂ ಗುರುಗಳ ಪಾದಕ್ಕೆ ನಮಸ್ಕರಿಸುವಂತೆ ಕಣ್ಸನ್ನೆ ಮಾಡಿದ. ಆಘಾತದಿಂದ ಹೇಗೋ ಚೇತರಿಸಿಕೊಂಡ ಗುರು, ತಾನು ಕನಸು ಕಾಣುತ್ತಿಲ್ಲವಲ್ಲ ಎಂಬುದನ್ನು ತನ್ನನ್ನು ತಾನೇ ಚಿವುಟಿಕೊಂಡು ಖಾತರಿ ಮಾಡಿಕೊಂಡ.

ಇನ್ನೂ ನಂಬಲು ಸಾಧ್ಯವಾಗದೇ, ಇದು ಹೇಗಾಯಿತು ಎಂದು ತಿಳಿಯುವ ಜಿಜ್ಞಾಸೆಯಿಂದ ಶಿಷ್ಯನನ್ನು ಬದಿಗೆ ಕರೆದು, “ನೀನು ಹೇಗೆ ಇದರಲ್ಲೆಲ್ಲಾ ಸಿಕ್ಕಿಹಾಕಿಕೊಂಡೆ?” ಎಂದು ಗುರು ಜಿಗುಪ್ಸೆಯಿಂದ ತಲೆ ಅಲ್ಲಾಡಿಸುತ್ತಾ ಕೇಳಿದ. ಶಿಷ್ಯ ತನ್ನ ತಲೆ ತಗ್ಗಿಸಿ, ಕಣ್ಣನ್ನು ಮೇಲೆತ್ತದೆ, ನಾಚಿಕೆಯಿಂದ ಉಸುರಿದ, “ನನ್ನ ಲಂಗೋಟಿಯನ್ನು ಕಾಪಾಡಿಕೊಳ್ಳಲು ಇಷ್ಟೆಲ್ಲಾ ಮಾಡಬೇಕಾಯಿತು”.

ಈ ಮೇಲಿನ ಕಥೆಯಿಂದ ನಿಮ್ಮ ಪ್ರಶ್ನೆಗೆ ಉತ್ತರ ದೊರೆತಿರಬಹುದು ಎಂದು ಆಶಿಸುತ್ತೇನೆ.

ಸ್ವಾಮಿ.

Translated from: The DNA of Desires

Painting inspired from(copied from 😉 ) https://youtu.be/CY9q1JaXemY