ಖಿನ್ನತೆಯಿಂದ ಒಬ್ಬರು ಬಳಲುತ್ತಿರುವುದು ನನಗೆ ಇಂದು ತಿಳಿಯಿತು. ನಾನು, ಅವರನ್ನು ಸ್ವತಃ ಭೇಟಿಯಾಗಿ ಇದರಿಂದ ಹೊರಬರಲು ಅವರಿಗೆ ಸಹಾಯ ಮಾಡಬೇಕು ಎಂದು, ಪ್ರಾಮಾಣಿಕವಾಗಿ ಅಪೇಕ್ಷಿಸಿದೆ. ಆದರೆ ನಾನು ಈಗ ಇರುವ ಜಾಗವನ್ನು ಪರಿಗಣಿಸಿ ಅದು ಸಾಧ್ಯವಾಗದೆಂದು ಅರಿತು, ನನ್ನ ಸಂದೇಶವನ್ನು ತಿಳಿಸಲು ಈ ಬ್ಲಾಗನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಖಿನ್ನತೆಯಿಂದ ಬಳಲಿದ ಎಷ್ಟೋ ಜನರು ನನಗೆ ತಿಳಿದಿದೆ; ಕೆಲವರು ಎಷ್ಟೊಂದು ತೀವ್ರವಾಗಿ ಕ್ಷೋಭೆಗೊಳಗಾಗಿದ್ದರು ಎಂದರೆ ತಮ್ಮ ಉದ್ಯೋಗವನ್ನು ಬಿಟ್ಟರು, ಮತ್ತು ಏಕಾಂತ ಬಂಧನದಂತೆ ತಮ್ಮನ್ನು ತಾವೇ ಮನೆಗಳಲ್ಲಿ ಕೂಡಿ ಹಾಕಿಕೊಂಡಿದ್ದರು. ನಾನು, ಹತ್ತಾರು ಗಂಟೆಗಳನ್ನು( ಕೆಲವು ತಿಂಗಳ ಅವಧಿಯಲ್ಲಿ), ಅವರನ್ನು ಇದರಿಂದ ಹೊರತರುವುದಕ್ಕೆ ಸಹಾಯ ಮಾಡಲು ಕಳೆದೆ.
ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಖಿನ್ನತೆ ಇದ್ದರೆ, ಅವರ ಕುಟುಂಬದವರು ಹಾಗೂ ಸ್ನೇಹಿತರೂ ಕೂಡ ಅದನ್ನು ಅನುಭವಿಸುತ್ತಾರೆ. ಆದರೆ, ಕುಟುಂಬದ ಅನ್ಯ ಸದಸ್ಯರು ಅದನ್ನು ಬಹಿರಂಗಪಡಿಸದೆ ನಿಭಾಯಿಸಬೇಕು. ಇಲ್ಲದಿದ್ದರೆ ರೋಗಿಯು ಇನ್ನೂ ಹೆಚ್ಚು ಬಳಲುತ್ತಾನೆ. ಈ ಬರಹದಲ್ಲಿ ಖಿನ್ನತೆಯ ಬಗ್ಗೆ ವಿವರಣೆ, ಅದಕ್ಕೆ ಕಾರಣ ಮತ್ತು ಅದರ ಪರಿಹಾರದ ಬಗ್ಗೆ ಕೇಂದ್ರೀಕರಿಸುತ್ತೇನೆ. ಈ ಬ್ಲಾಗ್ ನಲ್ಲಿ ಇದರ ವಿಷಯವಾಗಿ ಸಂಪೂರ್ಣ ವಿವರಣೆ ಕೊಡುವುದು ಕಷ್ಟಕರ, ಆದರೂ ಪ್ರಯತ್ನಿಸುತ್ತೇನೆ.
ನನ್ನ ದೃಷ್ಟಿಕೋನದಿಂದ ಸಲಹೆ ಕೊಡುವುದಕ್ಕಿಂತ ಮೊದಲು, ಕೆಲವೊಂದು ಮುಖ್ಯವಾದ ವಿಷಯವನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.
ಅದೆಂದರೆ:
ದಯವಿಟ್ಟು ನೆನಪಿನಲ್ಲಿರಲಿ, ನಾನು ವೈದ್ಯಕೀಯ ತಜ್ಞನಲ್ಲ, ಧ್ಯಾನದ ತಜ್ಞ. ಇಲ್ಲಿರುವ ದೃಷ್ಟಿಕೋನ ವರ್ಷಾನುಗಟ್ಟಲೆ (ಕ್ರಿಯಾ) ಯೋಗ ಸಾಧನೆ ಹಾಗೂ ತಿಂಗಳುಗಟ್ಟಲೆ ತೀವ್ರ ಸಾಧನೆಯಿಂದ ಆಧಾರಿತವಾದುದು. ಇಂತಹ ಧ್ಯಾನದ ಮೂಲ ಉದ್ದೇಶ, ಮನಸ್ಸಿನ ನಿಜವಾದ ಸ್ವಭಾವವನ್ನು ಅನುಭವಿಸುವುದು, ಮತ್ತು ಅದರ ಸಹಜ ಸ್ವಭಾವ ಸ್ಥಿತಿಯ ಪರಿಣಾಮದಿಂದ, ಮನಸ್ಸಿನ ರಹಸ್ಯಗಳ ಗೋಜು ಬಿಡಿಸುವುದು; ಮೆದುಳಿನದ್ದಲ್ಲ, ದೇಹದ್ದಲ್ಲ, ಕೇವಲ ಮನಸ್ಸಿನದು.
ಈ ಬರಹದಲ್ಲಿರುವ ಮಾಹಿತಿ, ಮುಖ್ಯವಾಗಿ ಹಾಗೂ ನೇರವಾಗಿ, ನಾನು ಸಮಾಧಿಯ ಸಮತೋಲನ ಸ್ಥಿತಿಯಲ್ಲಿರುವಾಗ ಹರಿದ ಜ್ಞಾನದ ಆಧಾರಿತವಾಗಿದೆ. ನನ್ನ ಅಂಕಿ-ಅಂಶಗಳನ್ನು ಉತ್ತಮವಾಗಿ ವಿವರಿಸಲು, ವೇದದ ಪಠ್ಯಗಳಿಂದ (ಆದುದರಿಂದ ಸಂಸ್ಕೃತ ಪದದ ಬಳಕೆಯಾಗಿದೆ) ಹಾಗೂ ಖಿನ್ನತೆಯಿಂದ ಬಳಲಿದವರ ಜೊತೆಗಿನ ನನ್ನ ಅನುಭವದಿಂದ, ಮಾಹಿತಿಯನ್ನು ಕಲೆ ಹಾಕಿದ್ದೇನೆ. ನೀವು ಪ್ರಪಂಚವನ್ನು ನನ್ನ ದೃಷ್ಟಿಯಿಂದ ನೋಡುವಂತಾದರೆ, ಅಲ್ಲಿಯ ಚಿತ್ರಣ ಅದೇ ಕ್ಷಣದಲ್ಲಿ ಬದಲಾಗುವುದು, ಹಾಗೂ ನನ್ನ ದೃಷ್ಟಿಯನ್ನು ಹೊಂದಲು ನಾನು ಮಾಡಿದ್ದನ್ನು ಮಾಡಬೇಕಷ್ಟೇ; ಬೇರೆಯದಲ್ಲಾ ಹಿಂಬಾಲಿಸುತ್ತದೆ. ಇಲ್ಲಿರುವ ಸಂದೇಶವನ್ನು ಗ್ರಹಿಸಲು ಈ ಬರಹವನ್ನು ದಯವಿಟ್ಟು ಹಲವಾರು ಬಾರಿ ಓದಿರಿ.
ಖಿನ್ನತೆ ಎಂದರೇನು?
ಖಿನ್ನತೆ ಎನ್ನುವುದು ಮನಸ್ಸಿನ ಒಂದು ಸ್ಥಿತಿ. ಇದು ಒಂದು ದೈಹಿಕ ಕಾಯಿಲೆಯಲ್ಲ; ನರವೈಜ್ಞಾನಿಕ ಅಸ್ವಸ್ಥತೆಯಲ್ಲ, ಹಾಗೂ ಇದು ಬಹಳ ವಿರಳವಾಗಿ ಮೆದುಳಿನ ಅಸಮರ್ಪಕ ಕ್ರಿಯೆ. ಇದು ನಿರ್ದಿಷ್ಟವಾಗಿ ಮನಸ್ಸಿನ ಸ್ಥಿತಿ. ಮತ್ತು ಮನಸ್ಸು ನಿಮ್ಮ ದೇಹ ಹಾಗೂ ಅದನ್ನು ಮೀರಿ ಹರಡಿಕೊಂಡಿದೆ. ಇದೇ ಕಾರಣಕ್ಕೆ ಮನಸ್ಸು ಆಹ್ಲಾದಕರವಾಗಿದ್ದರೆ, ಪೂರ್ತಿ ದೇಹ ಶಾಂತಗೊಳ್ಳುತ್ತದೆ, ಹಾಗೆಯೇ ಚಡಪಡಿಕೆಯಿಂದಿದ್ದರೆ ಸಂಪೂರ್ಣ ವ್ಯವಸ್ಥೆ ತಲೆಕೆಳಗಾಗುತ್ತದೆ.
ಖಿನ್ನತೆಯ ತೀವ್ರತೆಯನ್ನು ರೋಗಿಯ ರೋಗ ಲಕ್ಷಣದಿಂದ ನಿರ್ಧರಿಸಬಹುದು. ನಾನು ರೋಗಿ ಪದವನ್ನು ಉಪಯೋಗಿಸುತ್ತಿದ್ದರೆ, ನಿಜವಾಗಿಯೂ ವಿರೋಧಾಭಾಸವದು. ಖಿನ್ನತೆಯ ‘ರೋಗಿ’ ಇರಲು ಸಾಧ್ಯವಿಲ್ಲ, ಏಕೆಂದರೆ ಅದು ಒಂದು ರೋಗವಲ್ಲ. ಇದು ಕೇವಲ ಮಾನಸಿಕ ಮುದ್ರೆಗಳ(ವಾಸನೆಗಳ) ಘರ್ಷಣೆಯಿಂದಾದ ಅಸಾಮರಸ್ಯ, ಇದನ್ನು, ಮನಸ್ಸಿನ ಪ್ರವೃತ್ತಿಗಳು ಎಂದೂ ಹೇಳುತ್ತಾರೆ. ಮನಸ್ಸು ಅಸಮರ್ಪಕವಲ್ಲ, ಅದರ ಸಹಜ ಪ್ರಕೃತಿಯೆಂದರೆ, ಆನಂದ ಮತ್ತು ವ್ಯಕ್ತಿಗತ ಗುಣಲಕ್ಷಣೀಕರಣ, ಹಾಗೂ ಎಲ್ಲಾ ದ್ವಂದ್ವಗಳನ್ನೂ ಮೀರಿರುವಂಥದ್ದು. ಒಳ್ಳೆಯದು-ಕೆಟ್ಟದ್ದು, ಸರಿ-ತಪ್ಪು, ನಿಜ-ಸುಳ್ಳು ಮುಂತಾದವುಗಳು ಆ ತರಹದ ನೇಮಕ ಮತ್ತು ದ್ವಂದ್ವಗಳ ಉದಾಹರಣೆಯಾಗಿದೆ.
ಖಿನ್ನತೆಯ ತೀವ್ರತೆಯನ್ನು ಸರಿಯಾಗಿ ನಿರ್ಧರಿಸಬೇಕಂತಾದರೆ, ದಯವಿಟ್ಟು ಕೆಳಕಂಡ ವಿಭಾಗವನ್ನು ಸೂಕ್ಷ್ಮವಾಗಿ ಮತ್ತು ತಾಳ್ಮೆಯಿಂದ ಓದಿರಿ. ನಾನು ಸರಳವಾಗಿಡಲು ಪ್ರಯತ್ನಿಸುತ್ತೇನೆ, ಆದರೆ ನಾವು ಬಹಳ ಸಂಕೀರ್ಣವಾದ ವಿಷಯವನ್ನು ನಿರ್ವಹಿಸುತ್ತಿದ್ದೇವೆ. ಆದ್ದರಿಂದ, ಇದರ ಅರ್ಥವನ್ನು ಗ್ರಹಿಸಲು ಹಲವು ಬಾರಿ ಓದಿರಿ.
ನಿಮಗೆ ಮೂರು ಶರೀರವಿದೆ. ಸ್ಥೂಲ ಶರೀರ, ಸೂಕ್ಷ್ಮ ಶರೀರ, ಹಾಗೂ ಕಾರಣ ಶರೀರ. ನಿಮ್ಮ ಸ್ಥೂಲ ಶರೀರ, ಅಂದರೆ, ಭೌತಿಕ ಶರೀರ, ಮಾಂಸ ಹಾಗೂ ಮಜ್ಜೆ ಮುಂತಾದವುಗಳಿಂದ ಆಗಿದೆ. ನಿಮ್ಮ ಸೂಕ್ಷ್ಮ ಶರೀರ ನಿಮ್ಮ ಅಂತಃಪ್ರಜ್ಞೆ ಹಾಗೂ ನಿಮ್ಮ ಭಾವನೆಗಳ ಸಂಯೋಜನೆಯಿಂದ ಆಗಿದೆ. ಮತ್ತು ನಿಮ್ಮ ಕಾರಣ ಶರೀರ ಆತ್ಮದಿಂದ (ಸ್ವಯಂ /ಮನಸ್ಸು ) ಆಗಿದೆ.
ಸ್ಥೂಲ ಶರೀರ ಮತ್ತು ಸೂಕ್ಷ್ಮ ಶರೀರಗಳು, ಕಾರಣ ಶರೀರವನ್ನು ಆಧರಿಸಿದೆ. ಈ ಮೂರೂ ಶರೀರಗಳು ಐದು ಕೋಶಗಳ(ಹೊದಿಕೆಗಳ) ಸಂಯೋಜನೆಯೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಅವುಗಳು, ಅನ್ನಮಯ ಕೋಶ (ಸ್ಥೂಲ), ಮನೋಮಯ ಕೋಶ (ಮನಸ್ಸು), ಪ್ರಾಣಮಯ ಕೋಶ (ಪ್ರಾಣ ಶಕ್ತಿ), ವಿಜ್ಞಾನಮಯ ಕೋಶ (ಜ್ಞಾನ), ಮತ್ತು ಆನಂದಮಯ ಕೋಶ (ಆನಂದ). ಇದೆಲ್ಲಾ, ಸೇರಿಕೊಂಡು ನಿಮ್ಮಲ್ಲಿರುವ ಐದು ಮೂಲಭೂತ ವಾಯುವಿನ(ಶಕ್ತಿಯ) ಮೇಲೆ ಪ್ರಭಾವ ಬೀರುತ್ತದೆ. ಅವುಗಳೆಂದರೆ, ಪ್ರಾಣವಾಯು (ಪ್ರಾಣಶಕ್ತಿ), ಅಪಾನವಾಯು (ಅವರೋಹಣ ಶಕ್ತಿ), ಉದಾನವಾಯು (ಆರೋಹಣ ಶಕ್ತಿ), ಸಮಾನವಾಯು (ಉಷ್ಣಶಕ್ತಿ), ಮತ್ತು ವ್ಯಾನವಾಯು (ವ್ಯಾಪಿಸುವ ಶಕ್ತಿ).
ಈ ಶಕ್ತಿಗಳ ನಿರ್ವಹಣೆಯು, ಕೋಶದ ಸ್ಥಿತಿಯ ಮೇಲೆ ಹಾಗೂ ಮೂರು ಶರೀರದ ಮೇಲೆ ಪ್ರಭಾವ ಬೀರಬಹುದು ಮತ್ತು ಅದು ಹಿಮ್ಮುಖವಾಗಿಯೂ ಆಗಬಹುದು. ನಿಮ್ಮ ದೇಹದಲ್ಲಿ ನಡೆಯುವ ಪ್ರತಿಯೊಂದು, ಬೇಷರತ್ತಾಗಿ ಪ್ರತಿಯೊಂದೂ, ಈ ಮೊದಲೇ ತಿಳಿಸುವುದರ ಜೊತೆಗೆ ನೇರವಾದ ಕೊಂಡಿ ಹೊಂದಿದೆ. ಈ ಲೇಖನದಲ್ಲಿ, ಶಕ್ತಿ ಮತ್ತು ಕೋಶಗಳ ಬಗ್ಗೆ ಹೆಚ್ಚು ವಿಸ್ತಾರ ಪಡಿಸುವುದಿಲ್ಲ. ಇಲ್ಲದಿದ್ದರೆ ಇದು ಒಂದು ಪುಸ್ತಕವಾಗಿ ಬಿಡುತ್ತದೆ. ಆದರೂ ಕೂಡ, ಮೂರು ಕೋಶಗಳು ಮತ್ತು ಅದರ ಸಂಬಂಧವಾಗಿ ಆಗುವ ದೇಹದ ಮತ್ತು ಮನಸ್ಸಿನ ಸ್ಥಿತಿ, ಹಾಗೂ ಇದರಿಂದ ಗುಣ ಹೊಂದುವುದಕ್ಕೆ ಬೇಕಾಗುವ ಪರಿಹಾರವನ್ನು ಸಂಕ್ಷಿಪ್ತವಾಗಿ ವಿವರಿಸುತ್ತೇನೆ.
ಸ್ಥೂಲ ಶರೀರ (ಭೌತಿಕ ದೇಹ):
ಆಯುರ್ವೇದ ಹಾಗೂ ಬೇರೆ ಹಲವಾರು ಯೋಗ ಪಠ್ಯಗಳ ಪ್ರಕಾರ, ನಿಮ್ಮ ಭೌತಿಕ ಶರೀರ ಏಳು ಪ್ರಮುಖ ಅಂಶಗಳಿಂದ ಮಾಡಲ್ಪಟ್ಟಿದೆ. ಅದು, ಲಾಲಾ ರಸ, ರಕ್ತ, ಮಾಂಸ, ಕೊಬ್ಬು (ಮೇದ), ಮೂಳೆ, ಮಜ್ಜೆ, ಮತ್ತು ಸೃಜನಾತ್ಮಕ ದ್ರವ (ಸೂಕ್ರ). ನೀವು ತೆಗೆದುಕೊಳ್ಳುವ ಆಹಾರ ನಿಮ್ಮ ದೇಹ ಹೇಗೆ ಸ್ವೀಕರಿಸುತ್ತದೆ ಎಂದು, ವಾತ, ಪಿತ್ತ ಮತ್ತು ಕಫ ಎಂಬ ಮೂರು ಧಾತುಗಳ ಸಂಯೋಜನೆ ನಿರ್ಧರಿಸುತ್ತದೆ, ನೀವು ತೆಗೆದುಕೊಳ್ಳುವ ಗಾಳಿಯಿಂದ ಹಿಡಿದು ನೀವು ಆನಂದಿಸುವ ಸಿಹಿ ಪದಾರ್ಥಗಳ ತನಕ ಕೂಡ.
ಐದು ಶಕ್ತಿಗಳು, ಜೀರ್ಣಕ್ರಿಯೆ ಹಾಗೂ ಚಯಾಪಚಯ (ಮೆಟಬೋಲಿಸಂ) ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಕೇವಲ ಸ್ಥೂಲ ಶರೀರದ ದೃಷ್ಟಿಕೋನದಿಂದ. ಒಮ್ಮೆ, ಸ್ಥೂಲ ಶರೀರ, ಆಹಾರ ಪ್ರಕ್ರಿಯೆ ಮುಗಿಸಿದ ಮೇಲೆ, ನಿಮ್ಮ ಸೂಕ್ಷ್ಮ ಶರೀರ (ಅಂತಃಪ್ರಜ್ಞೆ) ಸ್ವತಃ ತನ್ನ ಸ್ಥಿತಿಯ ಆಧಾರದ ಮೇಲೆ, ತೆಗೆದುಕೊಂಡಿರುವ ಆಹಾರ ಯಾವ ರೀತಿ ಭೌತಿಕ ಶರೀರದ ಮೇಲೆ ಪರಿಣಾಮ ಬೀರುವುದು ಎಂದು ನಿರ್ಧಾರಕ್ಕೆ ಕಾರಣ ವಾಗುತ್ತದೆ. ಇದೇ ಕಾರಣದಿಂದ, ಕೆಲವರಲ್ಲಿ ಕಮ್ಮಿ ತಿಂದರೂ ತುಂಬಾ ಕೊಬ್ಬು ಶೇಖರಣೆಯಾಗುತ್ತದೆ, ಮತ್ತೆ ಕೆಲವರು ಎಷ್ಟು ತಿಂದರೂ ದೇಹದ ತೂಕ ಹೆಚ್ಚಾಗುವುದಿಲ್ಲ.
ಸೂಕ್ಷ್ಮಶರೀರ (ಅಂತಃಪ್ರಜ್ಞೆ):
ಸರಳವಾಗಿ ಹೇಳುವುದಾದರೆ, ನಿಮ್ಮ ಅಂತಃಪ್ರಜ್ಞೆಯ ಸ್ಥಿತಿಯ ಇನ್ನೊಂದು ಹೆಸರು ಸೂಕ್ಷ್ಮ ಶರೀರ. ಯಾವುದೇ ಸಮಯದಲ್ಲಿ, ನಿಮ್ಮ ಅಂತಃಪ್ರಜ್ಞೆಯು, ಈ ಐದು ಸ್ಥಿತಿಗಳಲ್ಲಿ ಯಾವುದಾದರಲ್ಲಿ ಒಂದಾಗಿರುತ್ತದೆ. ಅವುಗಳು, ಚೈತನ್ಯ, ಉಪಚೈತನ್ಯ, ಅನಾಚೈತನ್ಯ, ಆಚೈತನ್ಯ ಮತ್ತು ಪರಾಚೈತನ್ಯ ಹಾಗೂ, ನೀವು ಸ್ವಪ್ನ, ಜಾಗೃತ, ಸುಶುಪ್ತ (ನಿದ್ರೆ), ಅಥವಾ ತುರೀಯಾ ಸ್ಥಿತಿಯಲ್ಲೂ ಇರಬಹುದು.
ಸಂಕ್ಷಿಪ್ತತೆಯನ್ನು ಉಳಿಸಿಕೊಳ್ಳುವುದಕೋಸ್ಕರ ಇದರ ಬಗ್ಗೆ, ಮುಂದೆಂದಾದರೂ ವಿವರಿಸುತ್ತೇನೆ. ಸದ್ಯಕ್ಕೆ, ನಿಮಗೆ ಸಮಗ್ರ ಚಿತ್ರಣ ಕೊಡುವುದಕ್ಕೆ ಇದರ ಅರಿವು ನೀಡುತ್ತಿದ್ದೇನೆ. ನಿಮ್ಮ ಎಲ್ಲಾ ಭಾವನೆಗಳು ಜೀವಿಸುತ್ತಿರುವುದು ಇದೋ ಇಲ್ಲಿಯೇ, ಇದೇ ಸೂಕ್ಷ್ಮ ಶರೀರದಲ್ಲಿ. ಹಾಗೂ ಅನೇಕ ಕ್ರಿಯೆಗಳು ಕೂಡ. ದೇಹದ ಎಲ್ಲಾ ಅನೈಚ್ಛಿಕ ಕ್ರಿಯೆಗಳೂ, ಇವೆಲ್ಲವೂ ಕೂಡ, ಹೃದಯದ ಬಡಿತ, ನಾಡಿ ಮಿಡಿತ, ರಕ್ತದೊತ್ತಡ ಇನ್ನೂ ಮುಂತಾದವುಗಳು, ಸೂಕ್ಷ್ಮ ಶರೀರದ ಪ್ರಭಾವದಿಂದ ಆಗುತ್ತಿದೆ. ಸೂಕ್ಷ್ಮ ಶರೀರದ ನಿಯಂತ್ರಣದಿಂದ, ನೀವು ನೇರವಾಗಿ ದೇಹದ ಅನೈಚ್ಛಿಕ ಕ್ರಿಯೆಗಳನ್ನು ನಿಯಂತ್ರಿಸಬಹುದು. ಇದನ್ನು, ಪ್ರಯೋಗಾಲಯದಲ್ಲಿ ರುಜು ಪಡಿಸಬಹುದು, ಹಾಗೂ ನನ್ನ ಖುದ್ದು ಅನುಭವದಿಂದ ಹೇಳುತ್ತಿದ್ದೇನೆ.
ಕಾರಣ ಶರೀರ (ಆತ್ಮ) :
ನಿಮ್ಮ ಅಂತಃಪ್ರಜ್ಞೆ ಮತ್ತು ದೇಹದ ಅಸ್ತಿತ್ವ, ನೇರವಾಗಿ ಕಾರಣ ಶರೀರದ ಜವಾಬ್ದಾರಿಯಾಗಿದೆ. ನಾವು ಹೇಗೆ ಹೊಸ ಬಟ್ಟೆಗಾಗಿ, ಕೊಳೆಯಾದ ಬಟ್ಟೆಯನ್ನು ವರ್ಜಿಸುತ್ತೇವೆಯೋ, ಹಾಗೆ, ಮರಣದ ನಂತರ ಆತ್ಮ ಇನ್ನೊಂದು ದೇಹಕ್ಕೆ ಪ್ರಯಾಣ ಬೆಳೆಸುತ್ತದೆ. ಹೀಗೆಂದು ಹಲವು ಯೋಗ ಪಠ್ಯಗಳು ಉಲ್ಲೇಖಿಸುತ್ತದೆ. ಆದರೆ ಅದಷ್ಟೇ ಅಲ್ಲ; ಆತ್ಮ ಒಂಟಿಯಾಗಿ ಪಯಣಿಸುವುದಿಲ್ಲ. ಅದರ ಜೊತೆ ಮನಸ್ಸಿನ ಪ್ರವೃತ್ತಿಗಳೂ (ಚಿತ್ತವೃತ್ತಿಗಳು) ಹೋಗುತ್ತದೆ. ಅಂತಹ ಪ್ರವೃತ್ತಿಗಳು, ತುಂಬಾ ಬಲವರ್ಧಿತವಾಗಿರುತ್ತದೆ, ಏಕೆಂದರೆ ಅದು ಪ್ರಪಂಚವನ್ನು ಬಾಹ್ಯ ವಿದ್ಯಮಾನದಂತೆ ಅನುಭವಿಸುತ್ತದೆ; ಶಬ್ದ, ಸ್ಪರ್ಶ, ರಸ, ರೂಪ, ಮತ್ತು ಗಂಧ (ವಾಸನೆ) ಇವುಗಳನ್ನು, ಕಿವಿ, ಚರ್ಮ, ನಾಲಿಗೆ, ಕಣ್ಣು ಹಾಗೂ ಮೂಗಿನ ಮೂಲಕ ಗ್ರಹಿಸುವುದರಿಂದ.
ಕಾರಣ ಶರೀರ ಒಂದು ರೀತಿ ನಿಮ್ಮ ಸಹಜ ಸ್ವಭಾವವಾಗಿದೆ. ಅದು ಸ್ವತಃ ಅನಿಯಮಿತ, ನಿಮ್ಮ ಮನಸ್ಸಿನ ಸಹಜಸ್ಥಿತಿ. ಆದರೆ ತುಕ್ಕು ಹಿಡಿದ ಕಬ್ಬಿಣ ಹೇಗೆ ವಿದ್ಯುಚ್ಛಕ್ತಿಯ ಕಳಪೆ ವಾಹಕವೋ, ಹಾಗೆಯೇ, ನಿಯಮಾಧೀನ ಆತ್ಮ, ಆನಂದದ ಕಳಪೆ ವಾಹಕ. ಮನಸ್ಸಿನ ಎಲ್ಲಾ ಪ್ರವೃತ್ತಿಗಳು ಕಾರಣ ಶರೀರದಲ್ಲಿ ಜೀವಿಸುತ್ತದೆ
ರೋಗದ ಜೀವನ ಚಕ್ರ:
ಬಹುತೇಕ ದೈಹಿಕ ರೋಗಗಳು, ಕಾರಣವಲ್ಲ, ಲಕ್ಷಣವಷ್ಟೆ. ಪ್ರಸ್ತುತ ಕಲುಷಿತಗೊಂಡಿರುವ, ನಿಯಮಾಧೀನ ಅಂತಃಪ್ರಜ್ಞೆಯ ಲಕ್ಷಣಗಳು. ಯಾವಾಗ ಸೂಕ್ಷ್ಮ ಶರೀರ ಒತ್ತಡಕ್ಕೊಳಗಾಗುತ್ತದೆಯೋ, ಆಗ ಭೌತಿಕ ಶರೀರದಲ್ಲಿ ರೋಗದ ಚಿಹ್ನೆಗಳು ಕಾಣಿಸತೊಡಗುತ್ತದೆ. ಭೌತಿಕ ದೇಹದ ಕೆಲವೊಂದು ರೋಗಗಳನ್ನು, ಚಿಕಿತ್ಸೆ ಮತ್ತು ಉಪಚಾರಗಳಿಂದ, ಉಪಶಮನ ಮಾಡಬಹುದು. ಆದರೆ ಮೂಲಕಾರಣವನ್ನು ಸೂಕ್ಷ್ಮ ಶರೀರದಿಂದ ತೊಡೆದು ಹಾಕಿದಾಗ ಮಾತ್ರ ಸಂಪೂರ್ಣ ಗುಣಮುಖರಾಗಬಹುದು.
ಒಬ್ಬ ಕ್ಯಾನ್ಸರ್ ರೋಗಿಯು ಹೊಟ್ಟೆಯಲ್ಲಿನ ಗೆಡ್ಡೆಯ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದಾನೆ ಎಂದು ಕಲ್ಪಿಸಿಕೊಳ್ಳಿ. ಖಾಯಿಲೆಯ ಗುಣಲಕ್ಷಣ ಹೇಗೇ ಇರಲಿ, ಸ್ಥೂಲ ಶರೀರಕ್ಕೆ ಮತ್ತು ಸೂಕ್ಷ್ಮ ಶರೀರಕ್ಕೆ ಸಂಬಂಧಿಸಿದಂತೆ, ಅವನು ತನ್ನ ಜೀವನಶೈಲಿಯನ್ನು ಹಾಗೂ ಜೀವನದ ದೃಷ್ಟಿಕೋನವನ್ನು ಬದಲಿಸಿಕೊಳ್ಳದಿದ್ದರೆ, ಅವನ ಗೆಡ್ಡೆ ಪುನಃ ಬರುವ ಸಾಧ್ಯತೆ ಇದೆ. ಧ್ಯಾನದ ಮೂಲಕ ಅಥವಾ ಆಳವಾದ ಭಕ್ತಿಭಾವದಿಂದ (ಮಹಾ ಭಾವ), ಅವನು ತನ್ನ ಕಾರಣ ಶರೀರದ ಜೊತೆ ಸಂಪರ್ಕವನ್ನು ಹೊಂದಬಹುದಾದರೆ, ತನ್ನ ದೇಹದಿಂದ ರೋಗವನ್ನು ಶಾಶ್ವತವಾಗಿ ಹೊರಹಾಕಬಹುದು.
ಕೆಲವೊಂದು ರೋಗಗಳು, ಸ್ಥೂಲ ಶರೀರದಲ್ಲಿ ಉತ್ಪನ್ನ ಗೊಳ್ಳುತ್ತದೆ ಮತ್ತು ಸೂಕ್ಷ್ಮ ಶರೀರದ (ಅಂತಃಪ್ರಜ್ಞೆ) ಮೂಲಕ ಹೊರಟು, ಕಾರಣ ಶರೀರದ (ಆತ್ಮ) ಮೇಲೆ ಪರಿಣಾಮ ಬೀರುತ್ತದೆ. ರೋಗ, ಕಾರಣ ಶರೀರದಿಂದ ಅದದಕ್ಕೆ ಹೋಲಿಸಿದರೆ, ಈ ತರಹದ್ದು ಸುಲಭವಾಗಿ ಮತ್ತು ತ್ವರಿತವಾಗಿ ಸರಿಪಡಿಸಬಹುದು. ಅಂತಃಪ್ರಜ್ಞೆಯು ನೇರವಾಗಿ ಕಲುಷಿತವಾದ ಕಾರಣದಿಂದಾಗಿ, ಸೂಕ್ಷ್ಮ ಶರೀರದಲ್ಲಾಗುವ ಕಾಯಿಲೆಗಳು, ಭೌತಿಕ ಶರೀರದಲ್ಲಿ ಕಾಯಿಲೆಯಾಗಿ ಬೆಳೆಯುತ್ತದೆ. ಭಾವನಾತ್ಮಕ ಅಸಮತೋಲನೆಯಿಂದಾದ(ಏರುಪೇರು) ‘ಅನಾರೋಗ್ಯ ಸೂಕ್ಷ್ಮಶರೀರ’, ಎಲ್ಲಾ ದೀರ್ಘಕಾಲೀನ ಕಾಯಿಲೆಗಳಿಗೆ ಪ್ರಮುಖ ಕಾರಣ. ಕಾರಣ ಶರೀರದಿಂದ ಶುರುವಾದ ಕಾಯಿಲೆಗಳು ಗುಣವಾಗುವದಕ್ಕೆ ದೀರ್ಘಕಾಲ ತೆಗೆದುಕೊಳ್ಳುತ್ತದೆ ಹಾಗೂ ಅನೇಕ ಬಾರಿ ಭೌತಿಕ ದೇಹದಲ್ಲಿನ ಗಂಭೀರ ಪರಿಸ್ಥಿತಿಯಲ್ಲಿ ಕೊನೆಗೊಳ್ಳುತ್ತದೆ.
ನಿಮ್ಮ ನಿಯಮಾಧೀನ ಆತ್ಮದ ಸ್ಥಿತಿ ನೇರವಾಗಿ ಅಂತಃಪ್ರಜ್ಞೆಯ ಮೇಲೆ ಪ್ರಭಾವ ಬೀರುತ್ತದೆ, ಹಾಗೂ ಅದು ಪ್ರತಿಯಾಗಿ ನಿಮ್ಮ ಭೌತಿಕ ದೇಹದ ಮೇಲೆ. ಯಾರು ಒತ್ತಡರಹಿತ ಜೀವನವನ್ನು ಮಾಡುತ್ತಾರೋ, ಅವರು ಆರೋಗ್ಯಕರ ದೇಹದಲ್ಲಿ ದೀರ್ಘವಾದ ಜೀವನವನ್ನು ಆನಂದಿಸುತ್ತಾರೆ. ಭೌತಿಕ ದೇಹದ ಕಾರ್ಯಾಚರಣೆಗಳು, ಪ್ರಜ್ಞೆ ಮತ್ತು ಆತ್ಮದ ಪ್ರಭಾವಕ್ಕೊಳಪಟ್ಟಿರುತ್ತದೆ. ಉದಾಹರಣೆಗೆ, ಸಾಮಾನ್ಯ ಅರಿವಳಿಕೆ ಕೊಡಲಾದ ರೋಗಿಯು ಅಲ್ಲಾಡುವುದಿಲ್ಲ, ಏಕೆಂದರೆ ಅವನ ಪ್ರಜ್ಞೆ (ಸೂಕ್ಷ್ಮಶರೀರ) ಪ್ರಭಾವಿತವಾಗಿದೆ. ಮತ್ತು ಮೃತ ಎಂದು ಘೋಷಿಸಲ್ಪಟ್ಟವನಲ್ಲಿ, ಕಾರಣ ಶರೀರದ ಅನುಪಸ್ಥಿತಿ ಸೂಚಿಸುತ್ತದೆ, ಅಲ್ಲಿ ಮತ್ತೆಂದಿಗೂ ಪ್ರಜ್ಞಾಸ್ಥಿತಿ ಮತ್ತು ದೇಹದ ಚಲನೆಗಳು ಮರಳಿ ಬರುವುದಿಲ್ಲ.
ಖಿನ್ನತೆಗೆ ಕಾರಣಗಳು:
ಒಂದು ಯಥೋಚಿತ ಪ್ರಶ್ನೆ; ಖಿನ್ನತೆ ಯಾವ ಕಾರಣದಿಂದ ಆಗುತ್ತದೆ?
ಖಿನ್ನತೆ ಒಂದು ಮನಃಸ್ಥಿತಿ. ಅದು ಕಾರಣ ಶರೀರದಲ್ಲಿ ಹುಟ್ಟುತ್ತದೆ. ತನ್ನದೇ ಆದ ಸುಪ್ತ ಪ್ರವೃತ್ತಿಗಳಿಗೆ ಮನಸ್ಸು ಬಲಿಪಶು ಆಗಿದೆ. ನಿಮ್ಮ ಬಯಕೆಗಳನ್ನು ನಿಗ್ರಹಿಸುವುದರಿಂದ ಅಥವಾ ಅತೃಪ್ತ ಜೀವನದಿಂದ ಆಗಿರಬಹುದು, ಈ ಎರಡೂ, ನಿಯಮಾಧೀನ ಮನಸ್ಸಿನ ಅಜ್ಞಾನದ ಕಾರಣದಿಂದ ಆಗಿರುವುದು. ಬಹಳಷ್ಟು ಜನರು ಅತೃಪ್ತ ಜೀವನವನ್ನು ನಡೆಸುತ್ತಾರೆ. ಕೆಲವರು ಆತ್ಮದ ಧ್ವನಿಯನ್ನು ನಿರ್ಲಕ್ಷಿಸುವುದನ್ನು ಆಯ್ಕೆಮಾಡಿಕೊಳ್ಳುತ್ತಾರೆ, ಇನ್ನೂ ಹಲವರು ಪ್ರಾಪಂಚಿಕ ವಸ್ತು ವಿಷಯದಲ್ಲಿ ಮುಳುಗಿ ಹೋಗುತ್ತಾರೆ. ಆದರೆ ಒಂದು ದಿನ ಅದು ಸ್ವಾಧೀನಪಡಿಸಿಕೊಂಡು ಬಿಡುತ್ತದೆ.
ಅನಾರೋಗ್ಯ ‘ಕಾರಣ ಶರೀರ’ಕ್ಕೆ ಬಾಹ್ಯ ಔಷಧಿ ಅಥವಾ ಚಿಕಿತ್ಸೆ ಇರುವುದಿಲ್ಲ. ಖಿನ್ನತೆಯನ್ನು ಗುಣ ಪಡಿಸುವುದು ಹೇಗೆ ಎಂದು ವಿವರಿಸುವ ಮುಂಚೆ, ಖಿನ್ನತೆಯ ಮಾದರಿಗಳನ್ನು ಖಚಿತಪಡಿಸುವುದು ಮುಖ್ಯ.
ತೀವ್ರವಾದ ಖಿನ್ನತೆ:
ಖಿನ್ನತೆಯಿಂದ ನಿಮ್ಮ ಶರೀರಕ್ಕೆ ಆನಾರೋಗ್ಯವಾಗಿದ್ದರೆ, ಹಾಗೂ ನಿಮಗೆ ಅಧಿಕ ರಕ್ತದೊತ್ತಡ, ಊಟ ಸೇರದಿರುವುದು, ಅನಿಯಮಿತ ಹಸುವು, ಈ ತರಹದ ತೊಂದರೆಗಳಿದ್ದರೆ, ಖಿನ್ನತೆ ನಿಮ್ಮ ಭೌತಿಕ ಶರೀರಕ್ಕೆ ಇದಾಗಲೇ ಪಯಣಿಸಿದೆ. ನೀವು ಮಲಬದ್ಧತೆಯಿಂದ ಬಳಲುತ್ತಿರುವ ಸಾಧ್ಯತೆಯೂ ಇದೆ. ನಿಮ್ಮ ಖಿನ್ನತೆಯನ್ನು ತೀವ್ರ ಎಂದು ಪರಿಗಣಿಸಲು, ಈಗಾಗಲೇ ಹೇಳಿರುವ ಭೌತಿಕ ಲಕ್ಷಣದ ಜೊತೆಗೆ, ಮುಂದೆ ಉಲ್ಲೇಖಿಸಿರುವ, ‘ಮಧ್ಯಮ ಖಿನ್ನತೆ’ ಮತ್ತು ‘ ಖಿನ್ನತೆ ಭ್ರಮೆ ‘ ಯಲ್ಲಿನ ಗುಣಲಕ್ಷಣಗಳೂ ಇರುತ್ತದೆ.
ಒತ್ತಡದ ಜೀವನ, ಹಾಗೂ ಭಾವನಾತ್ಮಕ ಪ್ರಕ್ಷುಬ್ಧತೆಯಿಂದ ನೀವು ಈ ಹಂತದಲ್ಲಿದ್ದೀರಿ. ಮತ್ತು ನಿಮ್ಮ ಆತ್ಮ, ದೀರ್ಘಕಾಲದ ‘ಆಧ್ಯಾತ್ಮಿಕ ಬರ’ವನು ಹೇಗೂ ನಿಭಾಯಿಸುತ್ತಾ ಬದುಕುಳಿದಿದೆ. ಇದರರ್ಥ ಖಿನ್ನತೆಯನ್ನು ವಾಸಿ ಮಾಡಲಾಗುವುದಿಲ್ಲ ಎಂದಲ್ಲ; ಇದು ಮಾತ್ರ ಸೂಚನೆಗಳು. ನೀವು ಮೂರೂ ಮಟ್ಟಗಳಲ್ಲಿ ಕೆಲಸ ಮಾಡಬೇಕು. ಇದರ ಬಗ್ಗೆ, ‘ಚಿಕಿತ್ಸೆ’ ವಿಭಾಗದಲ್ಲಿ ಇನ್ನೂ ಸ್ವಲ್ಪ ವಿವರಿಸಿ ತಿಳಿಸುತ್ತೇನೆ.
ಮಧ್ಯಮ ಖಿನ್ನತೆ:
ನಿಮ್ಮ ದೇಹ ಆರೋಗ್ಯಕರವಾಗಿದ್ದು, ನೀವು ಮಾತ್ರ, ಈ ಮೊದಲು ಆನಂದಿಸುತ್ತಿದ್ದ ಬಹುತೇಕ ವಿಷಯಗಳಲ್ಲಿ ಅಭಿರುಚಿಯನ್ನು ಕಳೆದುಕೊಂಡಿದ್ದರೆ, ಮತ್ತು ನೀವು ಅನಿಶ್ಚಿತತೆ ಹಾಗೂ ಆಸಕ್ತಿರಹಿತರಾಗಿದ್ದರೆ, ನಿಮ್ಮ ಖಿನ್ನತೆ ಸೂಕ್ಷ್ಮ ಶರೀರದ ಮಟ್ಟಕ್ಕೆ ಏರಿರುವ ಸಾಧ್ಯತೆ ಇದೆ. ಆದರೆ ಇನ್ನೊ ಭೌತಿಕ ಶರೀರವನ್ನು ಸ್ಪರ್ಶಿಸಿಲ್ಲ. ಇದು ಇನ್ನೂ ಚೇತನಾ ಮಟ್ಟದಲ್ಲೇ ಇದೆ. ಇದನ್ನು ಶಿಸ್ತು ಮತ್ತು ಪ್ರಯತ್ನದಿಂದ ಗುಣಪಡಿಸಬಹುದು.
ಖಿನ್ನತೆಯ ಭ್ರಮೆ:
ನಿಮ್ಮ ಖಿನ್ನತೆಯ ಸೂಚನೆಗಳು, ಅಸಾಧ್ಯ ಬೇಸರತೆ, ಜಡತೆ, ನಿದ್ರಾಹೀನತೆ, ವಿಪರೀತ ಭಯ, ಮತ್ತು ಚಂಚಲತೆಗೆ ಸೀಮಿತವಾಗಿದ್ದರೆ, ನಿಮ್ಮ ಖಿನ್ನತೆ ಪ್ರಾಥಮಿಕ ಮಟ್ಟದಲ್ಲಿದೆ. ನೀವು ಇನ್ನೂ ಹಸಿರು ವಲಯದಲ್ಲಿರುವಿರಿ ಮತ್ತು ಕಡಿಮೆ ಕಾಲಮಿತಿಯಲ್ಲಿ ನಿಮ್ಮ ಮೂಲ ಮಾನಸಿಕ ಸ್ವಾಸ್ಥ್ಯವನ್ನು ಹೊಂದಬಹುದು.
ಖಿನ್ನತೆಗೆ ಚಿಕಿತ್ಸೆ:
ಚಿಕಿತ್ಸೆ ಕೆಲಸ ಮಾಡಬೇಕೆಂದರೆ, ನಾನು ಈಗಾಗಲೇ ಉಲ್ಲೇಖಿಸಿರುವುದರ ಬಗ್ಗೆ ನಿಮಗೆ ಸಮ್ಮತಿ ಇರಬೇಕು, ಈ ಮೇಲೆ ಹೇಳಿರುವುದನ್ನೆಲ್ಲಾ ಓದಿದ ಮೇಲೆ, ನೀವು ಒಪ್ಪಿಗೆಯಿಂದ ತಲೆಯನ್ನು ಅಲ್ಲಾಡಿಸುತ್ತಿದ್ದರೆ, ಓದುವುದನ್ನು ಮುಂದುವರಿಸಿ.
ನೀವು ಚಿಕಿತ್ಸೆಗೆ ನಿಜವಾಗಿಯೂ ಹೋಗುವುದಕ್ಕೆ ಮುನ್ನ, ದಯವಿಟ್ಟು ಇದರ ಅರಿವಿರಲಿ, ನಿಮ್ಮ ಖಿನ್ನತೆ ಯಾವುದೋ ಒಂದು ರಾತ್ರೋರಾತ್ರಿ ಆದ ಕ್ರಿಯೆಯ ಫಲಿತಾಂಶವಲ್ಲ, ಹಾಗಾಗಿ ಅದನ್ನು ರಾತ್ರೋರಾತ್ರಿ ಸರಿಪಡಿಸಲೂ ಆಗುವುದಿಲ್ಲ. ತ್ವರಿತವಾಗಿ ಖಿನ್ನತೆಯಿಂದ ಮುಕ್ತರಾಗಲು ಆಗುತ್ತಿಲ್ಲವಲ್ಲಾ ಎಂದು ನೀವು ಖಿನ್ನರಾಗಬಾರದು. ತಾಳ್ಮೆಯಿರಲಿ. ನೀವು ಮೊದಲು ಎಷ್ಟು ಸುಲಭವಾಗಿ ಖಿನ್ನತೆಗೆ ಜಾರಿದಿರೋ, ಅಷ್ಟೇ ಸುಲಭವಾಗಿ ಅದರಿಂದ ಖಂಡಿತವಾಗಿ ಹೊರಬರಬಹುದು ಕೂಡ. ಆದರೆ ಅದರ ಬಗ್ಗೆ ತಾಳ್ಮೆಯಿಂದ ಮತ್ತು ನಿರಾಳತೆಯಿಂದಿರಿ. ನಿಮ್ಮ ಮನಸ್ಸು ತಂತ್ರ ಮಾಡುತ್ತಿದೆ ಎಂದು ತಿಳಿದಿರಲಿ, ಮತ್ತು ಅದನ್ನು ಅಲ್ಲೇ ತಡೆಹಿಡಿಯಬಹುದಾದರೆ, ಅದು ನಿಲ್ಲುತ್ತದೆ.
ಚಿಕಿತ್ಸೆಯನ್ನು ನೋಡೋಣಾ:
ಪ್ರಸ್ತುತ, ಖಿನ್ನತೆ-ಶಮನಕಾರಿ ಔಷಧವನ್ನು ನೀವು ತೆಗೆದುಕೊಳ್ಳುತ್ತಿಲ್ಲವೆಂದರೆ, ಅರ್ಧ ಕೆಲಸ ಆಗಲೇ ಮುಗಿದಂತೆ. ದಯವಿಟ್ಟು ಮಾತ್ರೆಗಳನ್ನು ತೆಗೆದುಕೊಳ್ಳಲು ಶುರು ಮಾಡಬೇಡಿ. ಅವು ಕೃತಕವಾಗಿ ಮನಸ್ಸನ್ನು ಸಮಾಧಾನಗೊಳಿಸಲು ರೂಪಿಸಲಾಗಿರುವ, ನಿದ್ರೆ ಬರಿಸುವ ಉತ್ಪನ್ನಗಳು. ಅವು ಮನಸ್ಸು ಶಾಂತಿಯುತವಾಗಿದೆ ಎಂಬ ಭ್ರಮೆಯನ್ನು ರಚಿಸುತ್ತದೆ. ನಿಮ್ಮ ಮೆದುಳು ಅದಕ್ಕೆ ಹೊಂದುತ್ತಾ ಹೋದಂತೆ, ಔಷಧಿಯ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ.
ಕೇವಲ ಖಿನ್ನತೆಯಿಂದಷ್ಟೇ ಸಂಪೂರ್ಣ ಗುಣಮುಖರಾಗುವುದಲ್ಲದೆ, ನೀವು ಮೊದಲಿಗಿಂತ ಆರೋಗ್ಯವಂತರಾಗಲು, ದೇಹ, ಚೇತನ ಹಾಗೂ ಆತ್ಮ, ಈ ಮೂರೂ ಅಂಶಗಳನ್ನು ಸಮರ್ಪಕವಾಗಿಸಬೇಕು.
ಸ್ಥೂಲ ಶರೀರ (ಭೌತಿಕ ಶರೀರ ):
ನಿಮ್ಮ ಸ್ಥೂಲ ಶರೀರದ ಆರೋಗ್ಯವನ್ನು ಮರಳಿ ಪಡೆಯಲು, ಸಾಧ್ಯವಾದರೆ ಕೆಳಕಂಡವುಗಳನ್ನೆಲ್ಲಾ, ಅಥವಾ ಕೆಲವನ್ನಾದರೂ ಮಾಡಿ.
೧. ನಿಮ್ಮ ದೇಹವನ್ನು ಸ್ವಲ್ಪ ದಣಿಸಿರಿ. ಜಿಮ್ ನಲ್ಲಿ ವ್ಯಾಯಾಮ ಮಾಡಿ, ಅಥವಾ ಯಾವುದಾದರೂ ಕ್ರೀಡೆಯನ್ನಾಡಿ.
೨. ಕ್ಷಾರೀಯ ಗುಣವಿರುವ ತರಕಾರಿಗಳನ್ನು ಸೇವನೆ ಮಾಡಿ. ಆಮ್ಲೀಯ ಆಹಾರದಿಂದ ದೂರವಿರಿ. ಸಂಪೂರ್ಣ ಆಹಾರವನ್ನು ಹೆಚ್ಚಾಗಿ ಸೇವಿಸಿರಿ. ಪಿಷ್ಟ ಮತ್ತು ತೀಕ್ಷ್ಣ ಆಹಾರದಿಂದ ದೂರವಿರಿ.
೩. ಪ್ರತಿದಿನ ನಿಖರವಾಗಿ ಅದೇ ಸಮಯದಲ್ಲಿ ಆಹಾರವನ್ನು ಸೇವಿಸಿರಿ. ಒಂದು ಮತ್ತು ಇನ್ನೊಂದು ಊಟದ ಮಧ್ಯೆ ತುಂಬಾ ಸಮಯದ ಅಂತರ ಬೇಡ, ಅದು ಶೇಖರಿಸಿರುವ ಶಕ್ತಿಯನ್ನು ದೇಹವು ಬಳಸಿಕೊಳ್ಳುವುದಕ್ಕೆ ಪ್ರೇರೇಪಿಸುತ್ತದೆ, ಇನ್ಸುಲಿನ್ ನ (ಮೇದೋಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಸಕ್ಕರೆಯನ್ನು ಜೀರ್ಣಗೊಳಿಸುವ ಹಾರ್ಮೋನು) ಮಟ್ಟ ಇದರಿಂದ ಹೆಚ್ಚಾಗುತ್ತದೆ.
೪. ಪ್ರತಿದಿನ ನಿಖರವಾಗಿ ಅದೇ ಸಮಯಕ್ಕೆ ಮಲಗಲು ಹೋಗಿ. ನಿದ್ರೆ ಬರದಿದ್ದರೆ ಚಿಂತೆ ಬೇಡ. ಶಿಸ್ತುಬದ್ಧವಾಗಿ ಅದೇ ಸಮಯದಲ್ಲಿ ಹಾಸಿಗೆಯನ್ನು ಹೊಕ್ಕಿಬಿಡಿ.
೫. ಪ್ರತಿದಿನ ನಿಖರವಾಗಿ ಅದೇ ಸಮಯಕ್ಕೆ ಎದ್ದೇಳಿ.
೬. ದೂರದರ್ಶನದ ವೀಕ್ಷಣೆಯನ್ನು ಕಡಿತಗೊಳಿಸಿ, ಅದು ವಾಸ್ತವದಲ್ಲಿ ದೇಹವನ್ನು ಜಡಗೊಳಿಸುತ್ತದೆ
ಸೂಕ್ಷ್ಮಶರೀರ (ಚೇತನ) :
ನಿಮ್ಮ ಸೂಕ್ಷ್ಮಶರೀರವನ್ನು ಮತ್ತು ಅದರಿಂದ ನಿಮ್ಮ ಮಾನಸಿಕ ಆರೋಗ್ಯವನ್ನು ಶುದ್ಧೀಕರಿಸಲು ಇದನ್ನು ಅನುಸರಿಸಿ:
೧. ಸ್ವಲ್ಪ ನಿಸ್ವಾರ್ಥಸೇವೆ ಮಾಡಿ, ಅಥವಾ ನಿಮ್ಮನ್ನು ಮಾನಸಿಕವಾಗಿ ತೃಪ್ತಿಪಡಿಸುವ ಕೆಲಸ ಮಾಡಿ, ಅಥವಾ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ.
೨. ನಿಮ್ಮ ಮನಸ್ಸಿಗೆ ಖುಷಿ ತರುವುದನ್ನು ಮಾಡಿ. ನಿಮಗೆ ಹೊರಾಂಗಣದಲ್ಲಿ ಹೋಗುವುದು, ಚಿತ್ರಕಲೆ, ಅಡುಗೆ ಮಾಡುವುದು, ಓದುವುದು, ಯಾವುದಾದರೂ ಆಗಲಿ, ಅದನ್ನು ಮಾಡಿ. ಖಿನ್ನತೆಯ ಬಗ್ಗೆ ಮತ್ತು ಬೇರೆಯವರ ಕಥೆಗಳ ಬಗ್ಗೆ ಓದಬೇಡಿ.
೩. ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವವರ ಜೊತೆ ಸಂಭಾಷಿಸಬೇಡಿ. ದೂರವಾಣಿ ಕರೆಗಳನ್ನು ಮತ್ತು ಅರ್ಥಹೀನ ಮಾತುಕತೆಗಳನ್ನು ಕಡಿಮೆ ಮಾಡಿ.
೪. ಯಾರಲ್ಲೂ ನೀವು ಖಿನ್ನತೆಗೆ ಒಳಗಾಗಿರುವುದನ್ನು ಹೇಳಿಕೊಳ್ಳಬೇಡಿ. ಬಹುತೇಕ ಮಂದಿ, ‘ಚಿಂತೆ ಮಾಡಬೇಡ, ಇದು ಕೇವಲ ಮಾನಸಿಕ ಒತ್ತಡ’ ಎನ್ನುತ್ತಾರೆ ಮತ್ತು ಉಳಿದವರಿಂದ ಏನೊಂದೂ ಮಾಡಲು ಆಗುವುದಿಲ್ಲ.
೫. ನೀವು ಹಲವು ಬಾರಿ ನಿಮ್ಮ ವೈದ್ಯರನ್ನು ಭೇಟಿ ಮಾಡಿ, ಖಿನ್ನತೆಯ ಬಗ್ಗೆ ಇನ್ನೂ ಹೇಳಿಕೊಳ್ಳುತ್ತಿದ್ದರೆ, ನಿಮ್ಮ ವೈದ್ಯರೂ ಸಹ, ಒಂದು ಹಾಸ್ಯಾಸ್ಪದವಾದ ಔಷಧಿ ಯೋಜನೆ ನಿರ್ಧರಿಸಿ ಕಳುಹಿಸುತ್ತಾರೆ. ನಾನು ಇದನ್ನೂ ಕೂಡ ಸೂಚಿಸುತ್ತಿದ್ದೇನೆ, ಖಿನ್ನತೆಯು, ಔಷಧೀಯ ಉದ್ಯಮ ಸೃಷ್ಟಿಸಿರುವ, ಬಹಳ ಲಾಭ ಯುಕ್ತವಾದ ಒಂದು ‘ತಂತ್ರ’ ವ್ಯವಸ್ಥೆ.
ನೀವು ಹೋರಾಡಿ ನಾಶಮಾಡಬೇಕು ಎನ್ನುವಷ್ಟು ಖಿನ್ನತೆ ಭಯಪಡುವ ವಿಷಯವಲ್ಲ. ಅದು ಒಂದು ಮನಃಸ್ಥಿತಿ, ಆದಾಗ್ಯೂ ಅಪೇಕ್ಷಣೀಯವಲ್ಲದ್ದು. ನೀವು ಹೇಗೆ ಐಸ್ ಕ್ರೀಮ್ ಬಗ್ಗೆ ಯೋಚಿಸುತ್ತೀರಿ ಆದರೆ, ಅದನ್ನು ತಿನ್ನದೇ ಇರುವ ಆಯ್ಕೆ ಮಾಡಬಹುದು, ಅದೇ ರೀತಿ ನೀವು ಖಿನ್ನತೆಯನ್ನು ಹೋಗಬಿಡುವ ಆಯ್ಕೆಯನ್ನು ಮಾಡಬಹುದು. ನಿಮಗೆ ಖಿನ್ನತೆ ನಿಜವಾಗಲೂ ಇದೆ ಎಂಬ ಯೋಚನೆ ಪ್ರೋತ್ಸಾಹಿಸುವ ತನಕ, ಅದನ್ನು ಅರಿತು ಕೊಳ್ಳಲು ಅಥವಾ ಅನುಭವಿಸುವುದು ಅಸಾಧ್ಯ.
ಕಾರಣ ಶರೀರ (ಆತ್ಮ):
ಪ್ರತಿದಿನ ಕನಿಷ್ಠ ಪಕ್ಷ 30 ನಿಮಿಷವಾದರೂ ನಿಮ್ಮ ಸಮಯವನ್ನು ಈ ಕೆಳಗೆ ತಿಳಿಸಿರುವುದಕ್ಕೆ ವಿನಿಯೋಗಿಸಿ, ನಿಮ್ಮ ಖಿನ್ನತೆ ಪವಾಡಸದೃಶವಾಗಿ ಮರೆಯಾಗುವುದನ್ನು ವೀಕ್ಷಿಸಿ.
೧. ಬೆಳಗ್ಗೆ 15 ನಿಮಿಷಗಳು ಮತ್ತು ರಾತ್ರಿ ಮಲಗುವ ಮುಂಚೆ 15 ನಿಮಿಷಗಳು ಧ್ಯಾನ ಮಾಡಿ. ಇದಕ್ಕಿಂತ ಹೆಚ್ಚು ಅವಧಿ ಮಾಡುವುದು ಸಾಧ್ಯವಾದರೆ ಅದು ಇನ್ನೂ ಒಳ್ಳೆಯದು. ನೀವು ಧ್ಯಾನ ಮಾಡುವುದಕ್ಕಿಂತ ಮೊದಲು ಏಕಾಗ್ರತೆ ಬೆಳೆಸಿಕೊಳ್ಳಬೇಕು. ಅದಕ್ಕೆ, ಒಂದು ಮೇಣದ ಬತ್ತಿಯನ್ನು ಹಚ್ಚಿ ಅದನ್ನು ನಿಮ್ಮ ಕಣ್ಣಿನ ಮಟ್ಟದಲ್ಲಿ, ನಿಮ್ಮಿಂದ ಎರಡು ಅಡಿ ದೂರದಲ್ಲಿ ಇರಿಸಬೇಕು. ಅದನ್ನು, ಕಣ್ಣು ಮಿಟುಕಿಸದಂತೆ ನೋಡಲು ಸ್ವಲ್ಪ ಪ್ರಯತ್ನ ಮಾಡಿ, ನಿಮಗೆ ಸಾಧ್ಯವಾಗುವಷ್ಟು ಕಾಲ ವೀಕ್ಷಿಸಿ. ಇದು ತ್ರಾಟಕ ಏಕಾಗ್ರತೆ ಅಭ್ಯಾಸದಿಂದ ಸ್ವಲ್ಪ ಭಿನ್ನ, ಅದರಲ್ಲಿ ಕಣ್ಣನ್ನು ಮಿಟುಕಿಸುವಂತಿಲ್ಲ.
೨. ನಿಮ್ಮ ಮನಸ್ಸನ್ನು ಲೌಕಿಕ ವಿಷಯಗಳಿಂದ ದೂರವಿಡಲು, ಭಕ್ತಿಗೀತೆಗಳನ್ನು ಅಥವಾ ಆಹ್ಲಾದಕರವಾದ ಸಂಗೀತವನ್ನು ಕೆಲಸಮಯ ಕೇಳಿರಿ.
೩. ಸಾಧ್ಯವಾದಷ್ಟು ನಿಮ್ಮ ಬಲಬದಿ (ಮಗ್ಗುಲಲ್ಲಿ) ಮಲಗಿರಿ. ಇದು ನಿಮ್ಮ ಚಂದ್ರನಾಡಿಯನ್ನು(ಇಡ ನಾಡಿ) ಸಕ್ರಿಯಗೊಳಿಸುತ್ತದೆ, ಮತ್ತು ದೇಹದ ತಾಪಮಾನವನ್ನು(ಬಿಸಿ) ಕಡಿಮೆ ಮಾಡುತ್ತದೆ. ಧ್ಯಾನದ ಅಭ್ಯಾಸಗಳು ಶೀತಲ ಪ್ರದೇಶಗಳಲ್ಲಿ ಯಾಕೆ ಹೆಚ್ಚು ಯಶಸ್ವಿಯಾಗುತ್ತದೆ ಅನ್ನುವುದಕ್ಕೆ ಇಲ್ಲಿ ಒಂದು ಕಾರಣ ಇದೆ. ಶೀತಲದಲ್ಲಿ ಹಾಗೂ ಎಡ ಮೂಗಿನ ಹೊಳ್ಳೆಯಲ್ಲಿ ಉಸಿರಾಡುವುದರಿಂದ, ಮನಸ್ಸಿನ ವಿವೇಚನಾ (ತಾರತಮ್ಯ) ಶೀಲತೆ ಗಮನಾರ್ಹವಾಗಿ ಶಾಂತವಾಗುತ್ತದೆ.
೪. ಹರ್ಷಚಿತ್ತ ಪ್ರವೃತ್ತಿಯನ್ನು ಅನುಸರಿಸಲು ಪ್ರಯತ್ನಿಸಿ. ನೀವು ದೈವದ ಕೈಗಳಲ್ಲಿನ ಒಂದು ಉಪಕರಣ (ಸಾಧನ) ಮತ್ತು ಅವನು ನಿಮ್ಮನ್ನು ನೋಡಿಕೊಳ್ಳುತ್ತಿದ್ದಾನೆ, ಎಂದು ನಿಮಗೆ ತಿಳಿದಿರಲಿ. ಯಾರು ಅವನ ಆಶ್ರಯ (ಶರಣಾಗತಿ) ಬಯಸುತ್ತಾರೋ, ಅವರು ಬೇಷರತ್ತಾಗಿ ಅವನ ಅನುಗ್ರಹವನ್ನು ಆನಂದಿಸಬಹುದು. ಇದರಲ್ಲಿ ಸ್ವಲ್ಪವೂ ಸಂಶಯ ಬೇಡ.
೫. ಹಾಗೂ, ನಸುನಗಿ! ಪ್ರಯತ್ನಿಸಿ. ನಿಮ್ಮ ಮುಖದಲ್ಲಿ ನಸುನಗೆ ಯಾವಾಗಲೂ ಮಾಸದಂತೆ ನೋಡಿಕೊಳ್ಳಿ.
ಧ್ಯಾನವನ್ನು ಅಭ್ಯಸಿಸುವುದರಿಂದ ಐದು ಮೂಲಭೂತ ಶಕ್ತಿಗಳು ಶಾಂತವಾಗುತ್ತದೆ, ಹಾಗೂ ಐದು ಕೋಶಗಳ ಮೂಲಕ ಹೊಮ್ಮುತ್ತದೆ.
ಇದನ್ನು, ಅತ್ಯಂತ ಸರಳೀಕರಿಸುವುದಾದರೆ, ನೀವು ಮೂರು ಶರೀರ, ಐದು ಮೂಲಭೂತ ಶಕ್ತಿ ಹಾಗೂ ಐದು ಕೋಶಗಳು ಇದಕ್ಕಿಂತ ಹೆಚ್ಚೇನದೇನೂ ಅಲ್ಲ. ನೀವು ಈ ಮೂರು ಅಂಶಗಳ ಮೇಲೆ ಕೆಲಸ ಮಾಡಿದರೆ, ಅಂದರೆ, ಶರೀರ, ಚೇತನ (ಚಿತ್ತ) ಮತ್ತು ಆತ್ಮ, 28 ದಿನಗಳ ಅವಧಿಯಲ್ಲಿ, ಸ್ಪಷ್ಟವಾದ ಫಲಿತಾಂಶವನ್ನು ಕಾಣಬಹುದು.
ನಿರಂತರವಾಗಿ 40 ದಿನಗಳು ಮಾಡುವುದರಿಂದ ಶಕ್ತಿಗಳು (ಚೈತನ್ಯ) ಸುಸ್ಥಿರವಾಗುತ್ತದೆ. ಬಹುತೇಕ ಯೋಗಾಭ್ಯಾಸಗಳು ತನ್ನ ಪ್ರಭಾವ ತೋರಲು 6 ತಿಂಗಳು ಬೇಕಾಗುತ್ತದೆ. ಆದ್ದರಿಂದ ನೀವು ಆರು ತಿಂಗಳು ಮಾಡುವುದರಿಂದ, ಖಿನ್ನತೆಯಿಂದ ಮುಕ್ತರಾಗಿ, ನಿಮ್ಮ ಚೇತನದ ಸ್ಥಿತಿಯನ್ನು ಪರಿವರ್ತಿಸಬಹುದು ಹಾಗೂ ನಿಮ್ಮ ಚಕ್ರಗಳ ತಿರುಗುವಿಕೆಯನ್ನು ಕೂಡ. ನೀವು ಸಂಪೂರ್ಣವಾಗಿ ಗುಣಮುಖವಾಗುವಿರಿ. ಆರು ತಿಂಗಳುಗಳಲ್ಲಿ. ಯಾವುದೇ ಔಷಧಿಯಿಲ್ಲದೆ.
ಕಲೆ (ಕಲಾತ್ಮಕತೆ) ದೀರ್ಘ, ಹಾಗೂ ಸಮಯ ಕ್ಷಣಿಕ ವಾಗುತ್ತದೆ, ಎಂದು ರಾಬರ್ಟ್ ಫ್ರಾಸ್ಟ್ ಹೇಳುತ್ತಾರೆ. ನಾನು ಬರೆಯುವುದಕ್ಕೆ ಹಾಗೂ ಹಂಚಿಕೊಳ್ಳುವುದಕ್ಕೆ ಇದರ ಬಗ್ಗೆ, ತುಂಬಾ ಇದೆ. ಆದರೆ ಈ ಲೇಖನ ಆಗಲೇ ತುಂಬಾ ದೀರ್ಘವಾಗಿದೆ. ಈ ಮೇಲೆ ತಿಳಿಸಿದ್ದನ್ನು, ನೀವು ಅನುಸರಿಸಲು, ಪ್ರಯತ್ನಿಸುತ್ತೀರಿ ಹಾಗೂ ಸುಧಾರಿಕೆಯನ್ನು ಅನುಭವಿಸುತ್ತಿರಿ ಎಂದು ಆಶಿಸುತ್ತೇನೆ.
ಎಲ್ಲಾ ಸಚೇತನ ಜೀವಿಗಳು ಆನಂದದ ಅನುಭವವನ್ನು ಪಡೆಯಲಿ ಹಾಗೂ ಜೀವನ, ಕಾಯಿಲೆ, ಬಡತನ, ಹಾಗೂ ಹಸಿವಿನಿಂದ ಮುಕ್ತವಾಗಿರಲಿ.
ಶಾಂತಿ,
ಸ್ವಾಮಿ.
Translated from:
Translated by: Rekha MG
Edited by: H. R. Ravi Kumar, Retd. Engineer, Shimoga.
Comments & Discussion
14 COMMENTS
Please login to read members' comments and participate in the discussion.