ನಾನು ತುಂಬಾ ದಿನಗಳ ನಂತರ ಬರೆಯುತ್ತಿದ್ದೇನೆ, ಕೆಲವೊಂದು ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಿದ್ಧನಾಗಿರುವೆ. ನನ್ನ ಬಗ್ಗೆ ( ಎಲ್ಲಿ, ಹೇಗೆ, ಯಾವಾಗ, ಯಾಕೆ) ಮೂರೂ ಕಾಲಗಳ ವಿವರಣೆ ಇಲ್ಲಿದೆ. ಸಾಧ್ಯವಾದಷ್ಟು ಸಂಕ್ಷಿಪ್ತವಾಗಿ ವಿವರಿಸಲು ಪ್ರಯತ್ನಿಸುತ್ತೇನೆ.
ಮಾರ್ಚ್ 15, 2010ರ, ಮಧ್ಯಾಹ್ನ ನನ್ನ ಆಧ್ಯಾತ್ಮಿಕ ಪಯಣಕ್ಕೆ ಹೊರಟೆ. ಮಾರ್ಚ್ 18 ರಂದು, ಉತ್ತರ ವಾರಾಣಸಿಯಿಂದ 80 ಕಿ.ಮೀ ದೂರದಲ್ಲಿರುವ ಒಂದು ಹಳ್ಳಿಯಲ್ಲಿ ನನಗೆ ನನ್ನ ಗುರುಗಳು ಸಿಕ್ಕರು. ಅವರು 75 ವರ್ಷದ ಒಬ್ಬರು ನಾಗ ಸಂನ್ಯಾಸಿ. ಎಪ್ರಿಲ್ 11ರಂದು, ನನ್ನ ಗುರುಗಳು ನನಗೆ ಸಂನ್ಯಾಸ ದೀಕ್ಷೆಯನ್ನು ನೀಡಿದರು. ನಾಲ್ಕು ತಿಂಗಳ ನಂತರ ನಾನು ಅವರ ಆಶ್ರಮ ಬಿಟ್ಟು ಹೊರಟೆ, ಯಾಕೆಂದರೆ ನಾನು ನನ್ನ ಸತ್ಯದ ಅನ್ವೇಷಣೆಯಲ್ಲಿ ಎಲ್ಲವನ್ನೂ ಪರಿತ್ಯಜಿಸಿದ್ದೆ; ನನ್ನ ಗುರುಗಳು ಅವರ ಆಸ್ತಿ ಹಾಗೂ ಆಧ್ಯಾತ್ಮಿಕ ವ್ಯವಹಾರಗಳನ್ನು ನನಗೆ ವಹಿಸಲು ಇಚ್ಛೆ ಪಟ್ಟಿದ್ದರು.
ನಾನು ಹಿಮಾಲಯ ತಲುಪಿದೆ. ನೀಲಕಂಠಕ್ಕೆ ಹೋಗುವ ದಾರಿಯಲ್ಲಿ, ಬದರೀನಾಥದಿಂದ ಉತ್ತರಕ್ಕೆ 6 ಕಿ.ಮೀ ದೂರದಲ್ಲಿ, ನಾರಾಯಣ ಪರ್ವತವಿದೆ. ಅದರ ಶೃಂಗದಲ್ಲಿ ನನಗೆ ಅನುಕೂಲಕರವಾದ ಒಂದು ಗುಹೆ ಸಿಕ್ಕಿತು. ಆ ಗುಹೆಯಿಂದ ಅತ್ಯಂತ ಮನೋಹರವಾದ ದೃಶ್ಯ ಕಾಣಸಿಗುತ್ತಲಿತ್ತು; ಜಲಪಾತಗಳು, ಝರಿಗಳು, ತೊರೆಗಳು ಹಾಗೂ ಅಪ್ರತಿಮ ಪರಿಶುದ್ಧ ಹಿಮಾಲಯ. ಅಲ್ಲಿ ನಾನು 2 ಮುಖ್ಯ ಸಾಧನೆಗಳನ್ನು ಮಾಡಿದೆ.
ಎರಡು ತಿಂಗಳ ನಂತರ ನನ್ನ ಸಾಧನೆಗಳು ಪೂರ್ತಿಯಾದ ಮೇಲೆ, ಪುರಿ ಜಗನ್ನಾಥ ಕ್ಷೇತ್ರದ ಕಡೆಗೆ ಪಯಣ ಬೆಳೆಸಿದ. ಒಡಿಸ್ಸಾದ ಸಮುದ್ರತೀರದಲ್ಲಿ, ನನ್ನ ಸಾಧನೆಗೆ ಸೂಕ್ತವಾದ ಜಾಗ ಸಿಗಬಹುದೇ ಎಂದು ಎರಡು ವಾರಗಳ ವಿಫಲ ಪ್ರಯತ್ನದ ನಂತರ ಹಿಮಾಲಯಕ್ಕೆ ಹಿಂತಿರುಗಿದೆ. ಈ ಬಾರಿ ಹಿಮಾಲಯದ ಕಾಡಿನ ಅತ್ಯಂತ ಒಳಗಿನ ಜಾಗವನ್ನು ಸಾಧನೆಗೆ ಆಯ್ದುಕೊಂಡೆ. ಇನ್ನೆಂದಾದರೂ ಆ ಜಾಗದ ಬಗ್ಗೆ ವಿಸ್ತರಿಸುತ್ತೇನೆ, ಅದು ಒಂದು ಭವ್ಯವಾದ ಸ್ಥಳ.
ಜಿಂಕೆ, ಕಾಡುಹಂದಿ, ಕರಡಿ, ಹಾಗೂ ದೈತ್ಯಾಕಾರದ ಹೆಗ್ಗಣಗಳ ಬಿಡಾರವಾಗಿದ್ದ ಆ ಜಾಗ, ಪ್ರಕೃತಿಯ ಗಾಲ್ಫ್ ಕೋರ್ಸ್ ಹಾಗೆ ಅನಿಸುತ್ತಿತ್ತು. ನವಂಬರ್ 19ರಂದು ನನ್ನ ಸಾಧನೆಯನ್ನು ಪ್ರಾರಂಭಿಸಿದೆ. ನಂತರ, ಜನವರಿ 15ರಂದು ಅತ್ಯಮೂಲ್ಯ ಸಾಧನೆ ಪ್ರಾರಂಭ ಮಾಡುವ ಮುನ್ನ, ನಿಮಗೆಲ್ಲಾ ಇ-ಮೇಲ್ ಕಳುಹಿಸಲೆಂದು, ಒಂದು ದಿನದ ಮಟ್ಟಿಗೆ (ಡಿಸೆಂಬರ್ 27 ರಂದು) ಕೆಳಗಿಳಿದೆ. ಅದು 150 ದಿನಗಳ ಸಾಧನೆಯಾಗಿತ್ತು.
ದಿನದ 17 ಘಂಟೆಗಳು ಧ್ಯಾನ ಹಾಗೂ ಅದರ ಚಟುವಟಿಕೆಯಲ್ಲಿ ಕಳೆಯುತ್ತಿತ್ತು. ಇದರ ಬಗ್ಗೆ ಪೂರ್ಣ ವಿವರ ನಾನು ಹಿಂತಿರುಗಿದೆ ನಂತರ ನೀಡುತ್ತೇನೆ. ದೈವದ ಅನುಗ್ರಹದಿಂದ ಸಾಧನೆ ಯಶಸ್ವಿಯಾಗಿ ಸಂಪೂರ್ಣವಾಯಿತು.ನನ್ನ ಸಾಧನೆಯ ಕೊನೆಯ 100 ದಿನಗಳು ಸಂಪೂರ್ಣ ಏಕಾಂತದಿಂದಿತ್ತು, ನನ್ನ ವಿಚಾರಗಳು, ಹಾಗೂ ಯೋಚನೆಗಳಿಂದಲೂ ಕೂಡ. ಅದರ ಫಲಿತಾಂಶ ತೃಪ್ತಿಕರವಾಗಿತ್ತು.
ನಾನು ಈಗ ಇರುವ ಜಾಗದ ಬಗ್ಗೆ ಮಾಹಿತಿ ಕೊಡಲಾಗುವುದಿಲ್ಲ. ಆದರೆ ನಾನು ಸಂತೋಷ, ಸುರಕ್ಷಿತ ಹಾಗೂ ತುಂಬಾ ಆನಂದದಿಂದ್ದಿದ್ದೇನೆ. ಯಾವಾಗಲೂ ಆ ಪರಮಾನಂದ ನನ್ನನು ಸಂಪೂರ್ಣವಾಗಿ ಆವರಿಸಿರುತ್ತದೆ. ಹೊರಗಿನ ಪ್ರಪಂಚ ಹೇಗೆ ಇದ್ದರೂ, ನಾನು ಸದಾ ಧ್ಯಾನದ ಸ್ಥಿತಿಯಲ್ಲಿ ಇರುವುದನ್ನು ಕಲಿತಿದ್ದೇನೆ. ಈಗ ನನ್ನ ಆಧ್ಯಾತ್ಮಿಕ ಪಯಣದ ಮುಂದಿನ ಹಾಗೂ ಕೊನೆಯ ಗಮ್ಯ ಸ್ಥಾನಕ್ಕೆ ಹೊರಟಿದ್ದೇನೆ.
ನನ್ನ ಮುಂದಿನ ಹಾಗೂ ಮುಕ್ತಾಯದ ಸಾಧನೆಯನ್ನು ಒಂದು ಸಾಧನೆ ಅನ್ನುವುದಕ್ಕಿಂತ, ಪರೀಕ್ಷೆ ಅನ್ನಬಹುದು. ನನ್ನ ಮೂಲ ಹಾಗೂ ಪ್ರಮುಖ ಸಾಧನೆ ಸಂಪೂರ್ಣವಾಗಿದೆ. ನಾನು ಏನನ್ನು ಹುಡುಕುತ್ತಿದ್ದೆನೋ ಅದು ನನಗೆ ದೊರಕಿದೆ. ಅದರ ಅನುಭವವಾಗಿದೆ. ಈಗ ಎಲ್ಲಾ ಸ್ಪಟಿಕದಂತೆ ಸ್ಪಷ್ಟವಾಗಿದೆ. ಫೆಬ್ರವರಿ 13 ಮತ್ತು ಪುನಃ ಮೇ 15ರಂದು, ನನಗೆ ನನ್ನ ಇಷ್ಟ ದೇವರ ನಿಸ್ಸಂದಿಗ್ಧವಾದ ದರ್ಶನ ಸಿಕ್ಕಿದೆ. ಅದಾದ ನಂತರ ನನ್ನ ಸಂಪೂರ್ಣ ದೇಹವನ್ನು ಅಸಮಾನ್ಯ ಪರಮಾನಂದ ಸದಾ ವ್ಯಾಪಿಸಿಕೊಂಡಿದೆ. ನಾನು ಇಚ್ಚಿಸಿದಾಗ ಆ ಅನುಭವವನ್ನು ಹೊಂದಬಹುದಾಗಿದೆ
ಒಂದೇ ಸಲದ, ಕ್ಷಣಿಕ ಮಾತ್ರದ ಅನುಭವವನ್ನು ಪುನರಾವರ್ತಿಸಲು ಆಗಲಿಲ್ಲವೆಂದರೆ, ಅದರಿಂದ ಯಾವುದೇ ಪ್ರಯೋಜನವಿಲ್ಲವೆಂದಾಗುತ್ತದೆ. ನಮ್ಮ ಅನುಭವ, ನಮ್ಮ ಸ್ವಪ್ರಯತ್ನದಿಂದಾಗಿದ್ದರೆ, ಅದನ್ನು ನಾವು ಇಚ್ಛಿಸಿದಾಗ ಪುನಃ ಅನುಭವಿಸಬಹುದು. ನಾವು ಒಂದು ಕ್ರಮಬದ್ಧವಾದ ವಿಧಾನವನ್ನು ಅನುಸರಿಸಿದ್ದರೆ, ಇರುವ ಪರಿಸ್ಥಿತಿಯೂ ಭಿನ್ನವಲ್ಲದಿದ್ದರೆ, ನಾವು ಪ್ರತೀ ಬಾರಿಯೂ ಅದೇ ಅನುಭವವನ್ನು ಪಡೆಯಬಹುದು. ನಾನು ಹಿಂತಿರುಗಿದ ನಂತರ, ಹೇಗೂ ಅದರ ಬಗ್ಗೆ ಇನ್ನೂ ಹೆಚ್ಚು ವಿವರಿಸುತ್ತೇನೆ. ನನ್ನ ಮುಕ್ತಾಯದ ಸಾಧನೆ ಸಂಪೂರ್ಣವಾದ ಮೇಲೆ, ನಿಮ್ಮನ್ನೆಲ್ಲಾ ಬಂದು ಕಾಣುತ್ತೇನೆ. ನಾನು ಹಿಂದಿರುಗುವ ದಿನಾಂಕವನ್ನು ಈ ಇ-ಮೇಲ್ ನ ಕೊನೆಯಲ್ಲಿ ತಿಳಿಸುತ್ತೇನೆ. ಅದಕ್ಕಿಂತ ಮುಂಚೆ, ನನ್ನ ಆವಿಷ್ಕಾರದ ಸಾರಾಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಅದು ಹೀಗಿದೆ:
ಬುದ್ಧ ಪ್ರತಿಪಾದಿಸಿದ ಭಗವಂತ ಅಥವಾ ಸರ್ವೋಚ್ಚ ಸೃಷ್ಟಿಕರ್ತ ಇಲ್ಲವೆಂದು, ಕೃಷ್ಣ ಘೋಷಿಸಿದ ತಾನು ಭಗವಂತನೆಂದು, ಐನ್ ಸ್ಟೈನ್ ಹೇಳಿದ ಎಲ್ಲವೂ ಶಕ್ತಿಯ ಒಟ್ಟು ಮೊತ್ತವೆಂದು, ಮೀರಾ ಕೃಷ್ಣನಲ್ಲಿ ಸತ್ಯ ಕಂಡುಕೊಂಡರೆ, ರಾಮಕೃಷ್ಣ ಪರಮಹಂಸರು ಕಾಳಿಯಲ್ಲಿ, ತುಳಸೀದಾಸರು ರಾಮನಲ್ಲಿ, ಶಂಕರಾಚಾರ್ಯರು ನಿರಾಕಾರದಲ್ಲಿ, ಹೀಗೆ ಮತ್ತೂ ಅನೇಕರು ಅವರದ್ದೇ ಆದ ಸತ್ಯವನ್ನು ಕಂಡುಕೊಂಡಿದ್ದಾರೆ. ಕಾಮ, ಕ್ರೋಧ, ಅಹಂಕಾರ ಮುಂತಾದವು ಒಳ್ಳೆಯದಲ್ಲವೆಂದು ಬಹಳಷ್ಟು ಜನ ಒಪ್ಪಿಕೊಳ್ಳುತ್ತಾರೆ, ಆದರೂ ಯಾಕೆ ಅದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ? ನಾನು ನನ್ನ ಸತ್ಯವನ್ನು ಸಾಕ್ಷಾತ್ ಅನುಭವಿಸಲು ಇಚ್ಛಿಸಿದ್ದೆ, ನನ್ನ ಅನುಭವ ಮತ್ತು ಈಗಿನ ಮನಃಸ್ಥಿತಿಯನ್ನು ಮಾತಿನಲ್ಲಿ ವರ್ಣಿಸುವುದು ಅಸಾಧ್ಯವೆನಿಸುತ್ತದೆ.
ಆತ್ಮಸಾಕ್ಷಾತ್ಕಾರ ಒಂದು ಆಕಸ್ಮಿಕ ಶೋಧನೆಯಲ್ಲ, ಒಂದು ಆಹಾ! ಕ್ಷಣವಲ್ಲ, ಬುದ್ಧಿಶಕ್ತಿಯಿಂದ ಗ್ರಹಿಸಬಹುದಾದರೆ ಅದು ಒಂದು ಅಪರೋಕ್ಷ ಜ್ಞಾನವಾಗಿದೆ ಹಾಗೂ ನಿಜವಾದ ಸಾಕ್ಷಾತ್ಕಾರದಿಂದ ತುಂಬಾ ದೂರವಿದೆ ಎಂದರ್ಥ. ಯಾರು ಸ್ವಪ್ರಯತ್ನಕ್ಕೆ ಸಿದ್ಧರಿದ್ದಾರೋ ಅವರು ಖಂಡಿತ ಆತ್ಮಸಾಕ್ಷಾತ್ಕಾರವನ್ನು ಸಾಧಿಸಬಹುದು. ಸಾಕ್ಷಾತ್ಕಾರದ ಗೋಚರದಿಂದ ನಿಮಗೆ ಎಲ್ಲಾ ಉತ್ತರ ದೊರೆಯುತ್ತದೆ. ನಿಮ್ಮಲ್ಲಿ ಯಾವುದೇ ತರಹದ ಪ್ರಶ್ನೆಗಳು ಉಳಿಯುವುದಿಲ್ಲ. ಬೌದ್ಧಿಕವಾಗಿ ನಮಗೆ, ತತ್ವಶಾಸ್ತ್ರ ಅಥವಾ ಸಿದ್ಧಾಂತ ತತ್ವಗಳ ಆಧಾರ ಅರ್ಥವಾಗಬಹುದು, ಆದರೆ ಅದು ನಮ್ಮನ್ನು ಇನ್ನಷ್ಟು ಕಠಿಣವನ್ನಾಗಿಸುತ್ತದೆ. ಕೊನೆಗೆ ಸತ್ಯದ ದೃಢೀಕರಣ ವಿಲ್ಲದೆ, ಕೇವಲ ಸಿದ್ಧಾಂತಗಳಿಗೆ ಚಂದಾದಾರರಾಗಿ ಉಳಿಯುತ್ತೇವೆ.
ದೈವಕ್ಕೆ ಒಂದು ಆಕಾರವಿದೆ ಎಂದು ನೀವು ನಂಬುವುದಾದರೆ, ಇದೇ ಜನ್ಮದಲ್ಲಿ ನೀವು ಆ ಆಕಾರವನ್ನು ಕಾಣಬಹುದು. ದೈವ ನಿರಾಕಾರ ಎಂದು ನೀವು ನಂಬುವುದಾದರೆ, ನಿರೀಕ್ಷಿತ ಭವಿಷ್ಯದಲ್ಲಿ ಆಳವಾದ ಸಮಾಧಿಯನ್ನು ಅನುಭವಿಸಬಹುದು. ಇದನ್ನು ನಾನು ಹಲವು ಬಾರಿ ಅನುಭವಿಸಿದ್ದೇನೆ. ನಿಮ್ಮ ಜಗತ್ತು ನಿಮ್ಮ ಯೋಚನೆಗಳಿಂದ ಮಾಡಲಾಗಿದೆ. ನಿಮ್ಮ ಜಗತ್ತಿನಲ್ಲಿ ಭಗವಂತನಿದ್ದರೆ, ಮತ್ತು ನಿಮ್ಮ ಎಲ್ಲಾ ಯೋಚನೆಗಳು, ಎಲ್ಲಾ ಕ್ಷಣಗಳಲ್ಲಿ, ಅವನ ಬಗ್ಗೆಯೇ ಆಗಿದ್ದರೆ, ಅವನ ಸ್ವರೂಪ ನಿಮ್ಮ ಮುಂದೆ ಅಭಿವ್ಯಕ್ತವಾಗುತ್ತದೆ.
ನಿಮ್ಮಯ ಪ್ರಪಂಚದಲ್ಲಿ ಪರಮಾನಂದವಿದ್ದರೆ, ಮತ್ತು ಎಲ್ಲಾ ಸಮಯದಲ್ಲೂ, ಎಲ್ಲಾ ಯೋಜನೆಗಳನ್ನೂ ಪರಮಾನಂದದಲ್ಲಿ ಕೇಂದ್ರೀಕರಿಸಿದರೆ, ನೀವು ಅಂತಹ ಪರಮಾನಂದವನ್ನು ಅನುಭವಿಸುತ್ತೀರಿ. ಅದು ಸ್ವಲ್ಪ ಕಷ್ಟಸಾಧ್ಯವೇ ಏಕೆಂದರೆ ದೀರ್ಘಕಾಲ ಒಂದೇ ವಿಚಾರದಲ್ಲಿ ಮನಸ್ಸನ್ನು ಸಂಪೂರ್ಣ ಸ್ಥಿರವಾಗಿ ಇಡಬೇಕಾಗುತ್ತದೆ. ಆದರೆ ಆರಂಭದ ತೀವ್ರ ಪ್ರಯತ್ನದಿಂದ ಅದನ್ನು ಸಾಧಿಸಬಹುದು.
ಹೇಗೆ ಆರಂಭದಲ್ಲಿ ಓದಲು ಕಷ್ಟ ಪಡುವ ನವ ಸಾಕ್ಷರ, ಕೆಲ ಸಮಯದ ನಂತರ ಪ್ರಾವಿಣ್ಯತೆ ಪಡೆಯುತ್ತಾನೋ ಹಾಗೆ, ನಿಮ್ಮ ದಾರಿಯಲ್ಲಿ ಹಲವಾರು ಅಡಚಣೆಗಳು ಬಂದಾಗಲೂ, ಪ್ರಯತ್ನಶೀಲರಾಗಿದ್ದರೆ, ನಿಮ್ಮ ಗಮ್ಯಸ್ಥಾನವನ್ನು ಖಂಡಿತ ತಲುಪುವಿರಿ. ಭಕ್ತಿ ಅಥವಾ ಧ್ಯಾನವನ್ನು ಸರಿಯಾಗಿ ಮಾಡದಿದ್ದರೆ, ಗುರಿಯನ್ನು ಎಂದೂ ತಲುಪಲು ಆಗುವುದಿಲ್ಲ ಎಂದು ನನಗೆ ಈಗ ತಿಳಿದಿದೆ. ಅನೇಕ ಗ್ರಂಥಗಳು ಹೇಳಿರುವ ಅಸಮಾನ್ಯ ಅನುಭವಗಳು ಅಥವಾ ಪರಮಾನಂದ ಸ್ಥಿತಿ ಅನುಭವಕ್ಕೆ ಬರುವುದಿಲ್ಲ.
ಅದನ್ನು ಸರಿಯಾಗಿ ಮಾಡಿದ್ದೇ ಆದರೆ ತುಂಬಾ ಕಡಿಮೆ ಸಮಯದಲ್ಲಿ, ದೈವಿಕ ಅನುಭೂತಿಯನ್ನು ಪಡೆಯಬಹುದು. ಆದರೆ ಇಷ್ಟು ಮಾತ್ರ ಹೇಳುತ್ತೇನೆ, ಅದಕ್ಕೆ ತೀವ್ರವಾದ ಪ್ರಯತ್ನ ಬೇಕಾಗುತ್ತದೆ.
ಯಾವುದು “ಸರಿ” ಎಂಬ ನನ್ನ ನಿರೂಪಣೆಯನ್ನು, ನಾನು ಹಿಂತಿರುಗಿದ ನಂತರ ಸ್ಪಷ್ಟಪಡಿಸುತ್ತೇನೆ. ಸತ್ಯ ತುಂಬಾ ಸರಳ ಮತ್ತು ಅದು ನಿಮಗೆ ಗೊತ್ತು ಕೂಡ. ಆದರೆ ಅದನ್ನು ಅನುಭವಕ್ಕೆ ತರುವುದು ಮಾತ್ರ ಬೇರೆಯೇ ಮಾತು. ಎಲ್ಲರಿಗೂ ಸರಿ ಮತ್ತು ತಪ್ಪುಗಳ ಗ್ರಹಿಕೆ ಇರುತ್ತದೆ. ಆದರೂ ಕೂಡ ಯಾಕೆ ಅವರು ಅಪ್ರಾಮಾಣಿಕ ಹಾಗೂ ಅನಪೇಕ್ಷಿತ ಕಾರ್ಯಗಳಲ್ಲಿ ತೊಡಗುತ್ತಾರೆ? ಏಕೆಂದರೆ ಅವರು ಮನಸ್ಸನ್ನು ಪಳಗಿಸಿರುವುದಿಲ್ಲ.
ಒಂದು ಪ್ರಕ್ಷುಬ್ಧ(ಚಂಚಲ) ಮನಸ್ಸು ಹಾಗೂ ಅದರ ಚಿತ್ತವೃತ್ತಿಗಳು, ಅವರನ್ನು ಕೇವಲ ಶರೀರದ ಮೂಲಕ ಪ್ರಾಪಂಚಿಕ ಸುಖವನ್ನು ಅನುಭವಿಸಲು ಪ್ರೇರೇಪಿಸುತ್ತದೆ. ಭಕ್ತಿ ಅಥವಾ ಧ್ಯಾನದಲ್ಲಿ ಮನಸ್ಸನ್ನು ಪಳಗಿಸಲು, ತ್ರಿಕರಣ ಶುದ್ಧ ಶಿಸ್ತು ಸಹಾಯವಾಗುತ್ತದೆ. ನಂತರ ನೀವು ನಿರಂತರವಾಗಿ ಅನಿರ್ವಚನೀಯ ಆನಂದ ಹರಿಯುವುದನ್ನು ಅನುಭವಿಸುತ್ತೀರಿ. ನಾನು ಇದರ ಬಗ್ಗೆ ಬರೀ ಓದಿದ್ದೆ ಮತ್ತು ಬಹಳ ಅಪರೂಪವಾಗಿ ಅಲ್ಲೊಮ್ಮೆ, ಇಲ್ಲೊಮ್ಮೆ ಅನುಭವಿಸಿದ್ದೆ ಕೂಡ. ನಿಜವಾದ ಶಾಶ್ವತವಾದ ಸಮಾಧಿಯನ್ನು ಅನುಭವಿಸುವುದು ಒಂದು ನಂಬಲಸಾಧ್ಯದಷ್ಟು ಆಶ್ಚರ್ಯಕರವಾದದ್ದು. ತದನಂತರ, ಕೇವಲ ಸ್ವಲ್ಪ ಪ್ರಯತ್ನದಿಂದ ಆ ಆನಂದ ಸದಾ ನಿಮ್ಮೊಂದಿಗಿರುತ್ತದೆ.
ಸತ್ಯವನ್ನು ಬುದ್ಧಿಶಕ್ತಿಯಿಂದ ಗ್ರಹಿಸುವುದಕ್ಕೂ ಹಾಗೂ ಅದನ್ನು ಸ್ವತಃ ಅನುಭವಿಸುವುದಕ್ಕೂ ಇರುವ ವ್ಯತ್ಯಾಸವನ್ನು ನಾನು ನಿಮಗೆ ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ. ಯಾರಿಗಾದರೂ ಕಣ್ಣಿನಲ್ಲಿ ಪೊರೆ ಬಂದಿದೆ ಎಂದುಕೊಳ್ಳಿ, ಆತನಿಗೆ ತನ್ನ ದೃಷ್ಟಿ ದೌರ್ಬಲ್ಯದ ಅರಿವು ಇರುತ್ತದೆ. ಕೇವಲ ಅರಿವಿದ್ದರೆ ಸಾಕೇ ತನ್ನ ದೃಷ್ಟಿ ಸರಿ ಹೋಗಲು? ಅವನಿಗೆ ಎಲ್ಲಿ ತೊಂದರೆ ಇದೆ, ಮತ್ತು ಯಾವ ಕಾರಣದಿಂದ, ತಾನು ಸರಿಯಾಗಿ ನೋಡಲು ಆಗುತ್ತಿಲ್ಲ ಎಂಬುದು ಗೊತ್ತು. ಕಣ್ಣಿನ ಪೊರೆಯನ್ನು ಚಿಕಿತ್ಸೆಯ ಮೂಲಕ ಸರಿಪಡಿಸಬಹುದು ಎಂಬುದೂ ಗೊತ್ತು. ಅವನ ಬುದ್ಧಿಗೆ ಅದು ತಿಳಿಯುತ್ತದೆ, ಅರ್ಥವಾಗುತ್ತದೆ. ಆದರೆ ಕೇವಲ ಈ ಅರಿವು, ಆತನಿಗೆ ತಡೆರಹಿತವಾಗಿ ನೋಡಲು ಸಹಾಯ ಮಾಡುವುದಿಲ್ಲ.
ಆತನ ದೌರ್ಬಲ್ಯ, ಬುದ್ಧಿಶಕ್ತಿಯ ಅಸಮರ್ಪಕ ಕ್ರಿಯೆಯಿಂದ ಆದದ್ದಲ್ಲ. ಅದಕ್ಕಾಗಿ ಅದನ್ನು, ಬುದ್ಧಿಶಕ್ತಿಯಿಂದ ಸರಿಪಡಿಸಲಾಗುವುದಿಲ್ಲ. ಅವನ ದೃಷ್ಟಿಯನ್ನು ಸರಿಪಡಿಸಿಕೊಳ್ಳಲು ಚಿಕಿತ್ಸೆಯನ್ನು ಪಡೆಯಬೇಕು. ಹಾಗೆಯೇ, ನೀವು ಜಗತ್ತನ್ನು ಕಾಣುವ ವಿಕಾರ ದೃಷ್ಟಿ ಅಥವಾ ಭ್ರಮೆ, ನಿಮ್ಮ ಬುದ್ಧಿಶಕ್ತಿ ಸಮಸ್ಯೆಯಲ್ಲ.
ಯಾವುದಾದರೂ ತತ್ವಶಾಸ್ತ್ರವನ್ನು ಸ್ವೀಕೃತಿ ಮಾಡುವುದು ಅಥವಾ ಯಾವುದಾದರೂ ಸಿದ್ಧಾಂತವನ್ನು ನಂಬುವುದು – ಎರಡೂ ಬುದ್ಧಿಯ ಕ್ರಿಯೆ. ಇದರಿಂದ ಸಮಾಧಿ ಅಥವಾ ನಿಮ್ಮ ಇಷ್ಟ ದೇವರ ದರ್ಶನವಂತೂ ದೂರ, ತನ್ನನ್ನು ತಾನು ಸ್ವತಃ ಅನಾವರಣಗೊಳಿಸಿಕೊಳ್ಳಲೂ ಕೂಡ ಸಹಾಯಕರವಾಗುವುದಿಲ್ಲ. ಒಂದು ಸುಂದರ ವಿಷಯವೇನೆಂದರೆ, ಮನಸ್ಸನ್ನು ಹತೋಟಿಗೆ ತರುವುದರಿಂದ, ನಿಮ್ಮ ಸಹಜಗುಣವನ್ನು ಅನುಭವಿಸಬಹುದು ಮತ್ತು ನಿರಂತರ ಆನಂದದ ಹರಿವನ್ನು ಪಡೆಯಬಹುದು. ಚಂಚಲವಾದ ಮತ್ತು ಹತೋಟಿ ಇಲ್ಲದ ಮನಸ್ಸು, ಸರಿಯಾದ ಹಾಗೂ ಸಂಪೂರ್ಣವಾದ, ಭಕ್ತಿ ಅಥವಾ ಧ್ಯಾನ ಮಾಡಲು ಅಶಕ್ತವಾಗಿರುತ್ತದೆ. ಪರಿಶುದ್ಧತೆಯ ಕೊರತೆಯಿದ್ದಲ್ಲಿ, ಆಳವಾದ/ಗಾಢವಾದ ಯಾವುದೇ ಅನುಭವ ಪಡೆಯುವುದು ಅಸಾಧ್ಯವಾಗುತ್ತದೆ.
ಒಮ್ಮೆ ನಿಮ್ಮ ಅನುಭವವನ್ನು ಪುನರಾವರ್ತಿಸುವಂತಾದರೆ, ಶಾಶ್ವತವಾಗಿ ನಿಮ್ಮ ಪ್ರಪಂಚ ಬದಲಾಗಿ ಬಿಡುತ್ತದೆ. ಸಂಪೂರ್ಣವಾಗಿ ಮನಸ್ಸು ಆಂತರಿಕವಾಗಿ ತಿರುಗುತ್ತದೆ. ನಂತರ, ನೀವು ಈ ಮೂರು ಹಂತಗಳನ್ನು ಕ್ರಮಿಸುತ್ತೀರಿ.
ಅವಲಂಬಿ:
ಇದು ಮೊದಲ ಹಂತ. ನೀವು ಪ್ರತಿಯೊಂದಕ್ಕೂ ಪ್ರಪಂಚದ ಮೇಲೆ ಅವಲಂಬಿತರಾಗಿರುತ್ತೀರಿ. ಇತರರ ಟೀಕೆ ಅಥವಾ ವಿಮರ್ಶೆಗಳು, ನಿಮ್ಮಲ್ಲಿ ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳನ್ನು ಪ್ರಚೋದಿಸುತ್ತದೆ. ಅವರ ಉಪಸ್ಥಿತಿ ಅಥವಾ ಅನುಪಸ್ಥಿತಿಯಿಂದ ನಿಮಗೆ ಸಂತೋಷ, ದುಃಖಗಳು ಆಗುತ್ತದೆ. ಅವರ ಚಟುವಟಿಕೆಗಳು ಸಮಾಧಾನ ತರಬಹುದು ಅಥವಾ ವಿಷಾದತೆ. ಪ್ರಮುಖ ಅಂಶ ಏನೆಂದರೆ, ನಿಮ್ಮ ಯೋಚನಾ ಪ್ರಪಂಚ ಜನಗಳಿಂದ ತುಂಬಿರುತ್ತದೆ.
ಇದರ ಫಲಿತಾಂಶ, ನಿಮ್ಮ ಪ್ರಪಂಚ ಅವರ ಸುತ್ತಲೇ ಸುತ್ತುತ್ತಿರುತ್ತದೆ. ಹಾಗಾಗಿ, ನೀವು ಏಕಾಂತದಲ್ಲಿ ಜೀವಿಸಲು ಸಾಧ್ಯವಾಗುವುದಿಲ್ಲ. ಒಮ್ಮೆ ನೀವು ಆಂತರಿಕ ಪ್ರಪಂಚದತ್ತ ತಿರುಗಿದರೆ, ಮತ್ತು ಪ್ರತಿಯೊಂದರಲ್ಲೂ ನೈತಿಕತೆಯಿಂದ, ಶಿಸ್ತುಬದ್ಧ ಹಾಗೂ ತ್ರಿಕರಣ ಶುದ್ಧವಾಗಿ, ಪ್ರಾಪಂಚಿಕ ಮತ್ತು ಆಧ್ಯಾತ್ಮಿಕದಲ್ಲಿ ತೊಡಗಿಸಿಕೊಂಡರೆ, ನೀವು ಎರಡನೆಯ ಹಂತವನ್ನು ತಲುಪುತ್ತೀರಿ.
ಸ್ವಾವಲಂಬಿ:
ಸ್ಥಿರವಾದ ನೈತಿಕತೆ ಮತ್ತು ಸಂಪೂರ್ಣ ಶಿಸ್ತಿನಿಂದ, ನಿಮ್ಮ ಹಾಗೂ ನಿಮ್ಮ ಪ್ರಪಂಚವನ್ನು ನಿಮ್ಮದೇ ಆದ ದೃಷ್ಟಿಕೋನದಿಂದ ನೋಡಲು ಆರಂಭಿಸುತ್ತೀರಿ. ಅದು ಬೇರೆಯವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎನ್ನುವುದರ ಮೇಲೆ ಅವಲಂಬಿಸುವುದಿಲ್ಲ. ಆದರೂ, ಆಗಾಗ್ಗೆ ಸ್ವತಃ ನಿಮ್ಮ ಬಗೆಗಿನ ಅಭಿಪ್ರಾಯವನ್ನು ಬೇರೆಯವರು ಪ್ರಚೋದಿಸಬಹುದು.
ನೀವು ಹೆಚ್ಚೆಚ್ಚು ಸ್ವತಂತ್ರರಾಗುತ್ತಿದ್ದಂತೆ, ನಿಮಗೆ ಅನಿಸುತ್ತದೆ, ಏಕಾಂತತೆ ಒಂದು ಸೂಕ್ತ ಸಹಚರ ಎಂದು. ಹಾಗೂ, ಕೆಲವೊಮ್ಮೆ ಅದರ ಜೊತೆ ಸಮಯವನ್ನು ಕಳೆಯಲು ಅಭ್ಯಂತರವಿಲ್ಲ ಎಂದು. ನಿಮ್ಮ ಮನಃಸ್ಥಿತಿ ಒಂದು ಸ್ಥಿರತೆಯನ್ನು ಪಡೆಯುತ್ತದೆ. ನೀವು ಮಾಡುವ ಕೆಲಸಗಳನ್ನು ಆನಂದದಿಂದ ಮಾಡುತ್ತಿರುವುದನ್ನು ಗಮನಿಸುತ್ತೀರಿ.
ಆದಾಗ್ಯೂ, ಕೆಲವೊಮ್ಮೆ ಆಂತರಿಕ ಪ್ರಪಂಚವನ್ನು ಪ್ರಕ್ಷುಬ್ಧ ಯೋಚನೆಗಳು ಹಾಗೂ ಇಂದ್ರಿಯಗಳು ಆವರಿಸಬಹುದು. ನಿಮ್ಮ ದೃಷ್ಟಿಕೋನ ಇನ್ನೂ ಬೇರೆಯವರ ಜ್ಞಾನವನ್ನು ಆಧಾರಿಸಿದ ಪರಿಕಲ್ಪನೆಯಾಗಿದೆ. ನಿಮ್ಮ ಸ್ವಾಭಾವಿಕತೆಯ ಸುಳಿವು ಸಿಕ್ಕಂತೆ, ಪಟ್ಟುಬಿಡದೆ, ಅಸಡ್ಡೆ ಇಲ್ಲದೆ, ಸ್ವಯಂ ಶುದ್ಧೀಕರಣದಲ್ಲಿ ತೊಡಗಿಸಿಕೊಂಡರೆ ನೀವು ಮೂರನೆಯ ಹಂತವನ್ನು ತಲುಪುತ್ತೀರಿ.
ಸ್ವತಂತ್ರ:
ಒಂದು ತಡೆರಹಿತ ಆನಂದ ನಿಮ್ಮನ್ನು ಪ್ರವೇಶಿಸುತ್ತಿರುವ ಅನುಭವವನ್ನು ಹೊಂದುವಿರಿ. ನಿಮ್ಮಿಂದ ತೇಜಸ್ಸು ಹೊರಹೊಮ್ಮುತ್ತದೆ ಹಾಗೂ ನಿಮಗೆ ಯಾವುದರ ಬಗ್ಗೆಯೂ, ಯಾವುದೇ ಗೊಂದಲಗಳು ಇರುವುದಿಲ್ಲ. ಈಗ ನಿಮಗೆ ಎಲ್ಲವೂ ಅರ್ಥಗರ್ಭಿತವಾಗಿ ಅನಿಸುತ್ತದೆ. ನಿಮಗೆ ಜ್ಞಾನೋದಯ ಗೋಚರ ಉಂಟಾಗಿದೆ. ನೀವು ಇನ್ನು ನಿಮ್ಮ ಮನಸ್ಸಿನ ಪ್ರೇರಣೆಯಂತೆ ನಡೆಯುವುದಿಲ್ಲ. ನಿಮ್ಮ ಮನಸ್ಸು ಯೋಚನಾರಹಿತವಾಗಿ ಹಾಗೂ ಸ್ಥಿರವಾಗಿದೆ, ಮತ್ತು ನೀವು ಅದ್ಭುತ ಅರಿವು, ಮತ್ತು ವಿಶೇಷ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತೀರಿ.
ಒಮ್ಮೆ ನಿಮ್ಮ ಮನಸ್ಸಿನ ಪರಿಶುದ್ಧತೆಯನ್ನು ಕಂಡುಕೊಂಡ ಮೇಲೆ, ನಿಮ್ಮ ಸುತ್ತಮುತ್ತಲಿನ ಎಲ್ಲಾ ವಾಸ್ತವಿಕತೆಯ ಅರಿವಾಗುತ್ತದೆ. ಈ ಹಂತವನ್ನು ದಾಟುವ ಹೊತ್ತಿಗೆ ನಿಮಗೆ ಪ್ರತಿಯೊಂದರ ಉತ್ತರ ಸಿಕ್ಕಿರುತ್ತದೆ. ಲೌಕಿಕ ಜಗತ್ತಿನ ಪ್ರಚೋದನೆಗಳು ನಿಮ್ಮ ಮೇಲೆ ಯಾವುದೇ ಪರಿಣಾಮ ಬೀರದಿರುವುದನ್ನು ಕಾಣುತ್ತೀರಿ. ಇನ್ನು ಮುಂದೆ ಲೌಕಿಕ ಮೋಜಿನಲ್ಲಿ ಯಾವುದೇ ಬಗೆಯ ಒಲವು ಅಥವಾ ಹಾತೊರೆಯುವಿಕೆ ಉಳಿದಿರುವುದಿಲ್ಲ.
ನಿಮ್ಮ ಆಧ್ಯಾತ್ಮಿಕ ಅನುಭವಗಳು ಕೂಡ ಹೆಚ್ಚು ಮಹತ್ವ ಪಡೆಯುವುದಿಲ್ಲ. ನೀವು ಸ್ವತಂತ್ರರಾಗುತ್ತೀರಿ ಮತ್ತು ಅದೇ ನಿಮ್ಮ ಸಹಜ ಸ್ಥಿತಿ. ನಿರಂತರ ಆನಂದ, ನೀವು ಕೈಗೊಂಡ ಪ್ರತಿಯೊಂದು ಕಾರ್ಯದ ಪರಿಣಾಮ ಆನಂದ – ನಿಮ್ಮ ಇಷ್ಟ ದೇವರ ಸ್ವರೂಪ( ಗೋಚರತೆ ) ಮತ್ತು ಸಮಾಧಿಸ್ಥಿತಿ ನಿಮ್ಮನ್ನು ಯಾವಾಗಲೂ ಬಿಟ್ಟು ಹೋಗುವುದಿಲ್ಲ. ಸೂರ್ಯನ ಶಾಖ ಹೇಗೆ ಒಂದೇ ಸಮನಾಗಿ ಎಲ್ಲರಿಗೂ ತಲುಪುತ್ತದೆಯೋ, ಹಾಗೆಯೇ, ನಿಮ್ಮ ಸುತ್ತಲಿನ ಜನರೂ ಆನಂದವನ್ನು ಅನುಭವಿಸುತ್ತಾರೆ. ನೀವು ಯಾರನ್ನಾದರೂ ಅಥವಾ ಯಾವುದನ್ನಾದರೂ ನೋಡಿದರೆ ಅದು ಕೂಡ ಆನಂದಮಯವಾಗಿ ಕಾಣುತ್ತದೆ.
ನನ್ನ ಅನುಭವದ ಪ್ರಕಾರ, ಕಡಿಮೆ ಕಾಲಮಿತಿಯಲ್ಲಿ, ಈ ಜನ್ಮದಲ್ಲಿಯೇ, ಈ ಮೂರನೆಯ ಹಂತ ಹಾಗೂ ಅದನ್ನೂ ದಾಟಿ ಹೋಗಬಹುದು. ಆದರೆ, ಅದು ಅಷ್ಟು ಸುಲಭವಾಗಿ ಆಗುವುದಿಲ್ಲ. ಬಹಳ ಕಠಿಣ ಪರಿಶ್ರಮದ ಜೊತೆಗೆ ಸರಿಯಾದ ಕ್ರಮ ಮತ್ತು ಸಮತೋಲನೆ ಬೇಕಾಗುತ್ತದೆ. ಇದರ ಬಗ್ಗೆ ಕೂಲಂಕುಷವಾಗಿ ನಾನು ಮುಂದಿನ ದಿನಗಳಲ್ಲಿ ಬರೆಯಬಹುದು. ನನ್ನ ಸತ್ಯದ ಬಗ್ಗೆ ವಿಸ್ತರಿಸಲು ಇದು ಸೂಕ್ತವಾದ ವೇದಿಕೆ ಅಥವಾ ಮಾಧ್ಯಮವಲ್ಲ. ಆದಾಗ್ಯೂ, ನಿಮ್ಮೊಂದಿಗೆ ನನ್ನ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದೇನೆ.
ಇದು ಒಂದು ಕೇವಲ ಕಲ್ಪನೆಯ ಚಿತ್ರಣವಾಗಿ ಉಳಿದಿಲ್ಲ. ನಾನು ಈಗ ಯಾವುದನ್ನೂ ಹುಡುಕುತ್ತಿಲ್ಲ. ನಾನು ಸಾಧಿಸಲಿಚ್ಛಿಸುವುದು ಅಥವಾ ಮಾಡುವುದು ಏನೂ ಉಳಿದಿಲ್ಲ. ನನ್ನ ಸಂಕಲ್ಪಕ್ಕೋಸ್ಕರ ಹಾಗೂ ನನ್ನ ಸತ್ಯವನ್ನು ಓರೆಹಚ್ಚುವುದಕ್ಕೋಸ್ಕರ, ಸ್ವಲ್ಪ ಸಮಯ ಏಕಾಂತದಲ್ಲಿ ಕಳೆಯಬೇಕಾಗುತ್ತದೆ. ನೀವು ಯಾವುದನ್ನು ಕೇವಲ ದೃಷ್ಟಾಂತಗಳು ಎಂದು ಬಹುಶಃ ಅಂದುಕೊಂಡಿದ್ದರೆ, ಅಥವಾ ನೀವೂ ಆ ಆನಂದವನ್ನು ಅನುಭವಿಸಲು ಇಚ್ಚಿಸಿದರೆ, ನಾನು ನನ್ನ ಸತ್ಯದ ನಿರೂಪಣೆಯನ್ನು ನಿಮ್ಮೊಂದಿಗೆ ಸಂತೋಷದಿಂದ ಹಂಚಿಕೊಳ್ಳುವೆ.
ಇನ್ನೂ ಎಷ್ಟು ದಿನ ಅನಗತ್ಯವಾಗಿ ಶ್ರಮಿಸುತ್ತೀರಿ? ನಿಮ್ಮ ಕುರುಡುತನದ ಅಸಮರ್ಥತೆ ಯಿಂದ, ಪರವಾನಗಿ ಅಧಿಕಾರಿಗಳು, ನಿಮ್ಮ ಪರವಾನಗಿಯನ್ನು ನವೀಕರಿಸಲು ನಿರಾಕರಿಸುವ ತನಕ ನೀವು ಮಾರುಕಟ್ಟೆಗೆ ಹೋಗಲು ಯೋಚಿಸಿದ್ದೀರಾ? ನೀವು ಜೀವನ ಹೀಗೆ ಎಂದು ನಟಿಸುತ್ತಾ ಇರುತ್ತೀರಾ? ನೀವು ಯಾರಿಗಾದರೂ ಅಥವಾ ಯಾವುದಕ್ಕಾದರೂ ಕಾಯುತ್ತಿದ್ದೀರಾ? ಜನಗಳ ಸುತ್ತಾ ನಿಮ್ಮ ಲೋಕವನ್ನು ನಿರ್ಮಿಸುವುದನ್ನು ಮುಂದುವರಿಸುತ್ತೀರಾ? ನೀವು ಮುದುಕರಾಗಿ, ಕೇವಲ ನಿಮ್ಮ ಮಕ್ಕಳ ದೂರವಾಣಿ ಕರೆಗಳಿಂದ ಸಂತೃಪ್ತರಾಗುತ್ತೀರ?
ಒಂದು ದಿನ ನಿಮಗಷ್ಟೇ ಕೇಳಿಸುವ ಒಂದು ಹೊಡೆತದಿಂದ ಎಚ್ಚರಗೊಳ್ಳುತ್ತೀರಿ. ಆ ಹೊಡೆತ ನಿಮ್ಮನ್ನು ಚಿರನಿದ್ರೆಯಲ್ಲಿ ಮಲಗಿಸುವುದಾಗಿರುತ್ತದೆ. ಆ ಕ್ಷಣದಲ್ಲಿ, ನೀವು ಅರಿತುಕೊಳ್ಳುತ್ತೀರಿ, ನಿಮ್ಮ ಅಂತಿಮ ಊಟ, ಅಂತಿಮ ದೂರವಾಣಿ ಕರೆ, ನಿಮ್ಮ ಅಂತಿಮ ಇಮೇಲ್, ನಿಮ್ಮ ಅಂತಿಮ ಸ್ನಾನ, ನಿಮ್ಮ ಅಂತಿಮ ನಿದ್ರೆ ಮತ್ತು ನಿಮ್ಮ ಅಂತಿಮ ಸಂಭಾಷಣೆ, ಎಲ್ಲವೂ ಆಗಲೇ ಆಗಿಹೋಗಿದೆ ಎಂದು. ಇನ್ನು ಬೇರೆಯವರದು ಅಂತಿಮ ಮಾತು( ನಿರ್ಧಾರ) ನಿಮ್ಮದಲ್ಲ. ಉಳಿಯಬೇಕೋ ಅಥವಾ ಹೋಗಬೇಕೋ ಎನ್ನುವ ನಿಮ್ಮ ಆದ್ಯತೆಯು ನಿರ್ದಯವಾಗಿ ನಿರಾಕರಿಸಲ್ಪಡುತ್ತದೆ.
ನಾನು ನಿಮಗೆ ಪ್ರಪಂಚವನ್ನು ಪರಿತ್ಯಜಿಸಲು ಸೂಚಿಸುತ್ತಿಲ್ಲ. ಅದರ ಬದಲಾಗಿ ನೀವು ಜೀವಿಸುವುದನ್ನು ಕಲಿಯಿರಿ ಎಂದು ಬೇಡಿಕೊಳ್ಳುತ್ತಿದ್ದೇನೆ. ಸಂತೋಷದಿಂದ, ಆನಂದದಿಂದ, ಶಾಂತಿಯುತವಾಗಿ, ಪ್ರಪಂಚವನ್ನು ಸರಿಯಾದ ದೃಷ್ಟಿಕೋನದಿಂದ ಹಾಗೂ ನಿಮ್ಮ ಸತ್ಯ ನಿರೂಪಣೆಯಿಂದ ಜೀವಿಸಿ. ನೀವು ನಿಮ್ಮ ಮನೆಯಲ್ಲಿಯೇ ವಾಸಿಸುತ್ತೀರಿ, ನಿಮ್ಮ ಬಟ್ಟೆಯನ್ನೇ ಧರಿಸುತ್ತೀರಿ, ನಿಮ್ಮ ವಾಹನವನ್ನೇ ಚಲಾಯಿಸುತ್ತೀರಿ, ನಿಮ್ಮ ಉದ್ಯೋಗ ಸ್ವತಃ ಮಾಡುತ್ತೀರಿ. ಆದರೆ, ಪ್ರಪಂಚದ ಹಾಗೂ ಸ್ವತಃ ನಿಮ್ಮ ಮೇಲಿನ ದೃಷ್ಟಿಕೋನ ನಿಮ್ಮದಲ್ಲ. ನಿಮ್ಮ ಸುತ್ತಲಿನ ಪ್ರಪಂಚದಿಂದ ನಿರಂತರ ಅದು ಬಾಧಿತವಾಗುತ್ತಿದೆ. ಇದು ಈ ರೀತಿ ಇರಬೇಕಾಗಿಲ್ಲ.
ನಿಮ್ಮ ನಿಜ ಸ್ವಭಾವ ಅನ್ವೇಷಿಸಿಕೊಂಡಾಗ, ಪ್ರಾಪಂಚಿಕ ಚಟುವಟಿಕೆಗಳ ಮಧ್ಯದಲ್ಲೂ ನೀವು ಪರಿತ್ಯಾಗಿಗಳಾಗಿರುತ್ತೀರಿ. ನೀವು ನಿಮ್ಮ ದೈವಿಕತೆಯನ್ನು ತೋರಿಸಿ ಮತ್ತು ಅದನ್ನು ಅನುಭವಿಸಬಹುದು, ಅಥವಾ, ನಿಮ್ಮ ಈಗಿನ ಜೀವನಶೈಲಿಯನ್ನು ಮುಂದುವರಿಸುತ್ತಾ ಮತ್ತು ಭಾವನೆಗಳ ಏಳುಬೀಳುಗಳನ್ನು ಆಗಾಗ್ಗೆ ಅನುಭವಿಸುತ್ತಾ ಇರಬಹುದು. ಒಬ್ಬ ಅನನುಭವಿ ಅಥವಾ ನುರಿತ ಸರ್ಫರ್, ಅತ್ಯುತ್ತಮವಾದ ಉಬ್ಬರ ಗಳಿಗೆ ಕಾಯುತ್ತಲೇ ಸಮಯ ಕಳೆಯಬಹುದು ಅಥವಾ ಬರುವ ಅಲೆಗಳಲ್ಲೇ ಸರ್ಫ್ ಮಾಡಲು ಶುರು ಮಾಡಬಹುದು.
ಕನಿಷ್ಠಪಕ್ಷ, ಪ್ರಾಮಾಣಿಕ, ನಿರಂತರ, ಛಲಬಿಡದ ಮತ್ತು ಗಂಭೀರವಾದ ಪ್ರಯತ್ನ ಪಡುವುದು ಮುಖ್ಯವಾಗುತ್ತದೆ. ಸ್ವಲ್ಪ ನಿಮ್ಮ ಸುತ್ತಲೂ ವೀಕ್ಷಿಸಿ. ಅಲ್ಲಿ ಎಷ್ಟೊಂದು ಅವ್ಯವಸ್ಥೆ ಇದೆ. ನಿಮಗೆ ಅದು ಬೇಕಾಗಿದೆಯೆ? ಆಂತರಿಕ ಅವ್ಯವಸ್ಥೆಯನ್ನು ಸರಿಪಡಿಸಿ, ಹೊರಗೆ ಅದು ತಾನೇ ತಾನಾಗಿ ಸರಿಹೋಗುತ್ತದೆ. ಹೊರಗಿನ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಿ, ಒಳಗಿನ ಸ್ವಚ್ಛತೆ ಸ್ವಯಂ ಆಗುತ್ತದೆ. ನಿಮ್ಮ ಜೀವನ ಬೇರೆಯವರ ಸಂಘದಲ್ಲಿ ಇರಲಿ, ಆದರೆ ಅವರ ಪ್ರಭಾವದಲ್ಲಲ್ಲ. ನಿಮ್ಮ ನಿರೂಪಣೆಯಿಂದಿರಲಿ. ನಿಮ್ಮ ಸತ್ಯದ ಅನ್ವೇಷಣೆಯಿಂದ ನೀವು ಆಶ್ಚರ್ಯ ಚಕಿತರಾಗುತ್ತೀರಿ. ಅದು, ನಿಮ್ಮನ್ನು ಚಕಿತಗೊಳಿಸಿ, ದಿಗ್ಬ್ರಮೆ ಗೊಳಿಸಿ, ಮೂಕವಿಸ್ಮಿತರನ್ನಾಗಿಸಿ ಮತ್ತು ಸಂಪೂರ್ಣ ತೃಪ್ತಿಕರವಾಗಿಸಿ ಬಿಡುತ್ತದೆ.
ಈ ಜೀವನ ಒಂದು ದೀರ್ಘವಾದ ಪಯಣವಾಗಿದೆ. ಅದರಲ್ಲಿ ಕೆಲವೊಂದು ತಿರುವುಗಳು, ನಿಲುಗಡೆ ಚಿಹ್ನೆಗಳು, ವೇಗೋಲ್ಲಂಘನೆಯ ಚೀಟಿಗಳು (ಒಂದೋ, ಎರಡೋ), ನಿಧಾನ ಸಂಚಾರ, ಹೊಂಡಗಳು, ಯಾಂತ್ರಿಕ ವೈಫಲ್ಯ ಕೂಡ ಇರುತ್ತದೆ. ಮುಂದುವರೆಯುತ್ತಾ ಹೋದಂತೆ ನಿಮ್ಮ ಪ್ರಯಾಣದ ಗಮ್ಯಸ್ಥಾನವನ್ನು ತಲುಪುತ್ತೀರಿ ಮತ್ತು ನಂತರ ನೀವು ನಿಮ್ಮ ಮನೆಗೆ ಹಿಂದಿರುಗಲು ಇಚ್ಛಿಸುತ್ತೀರಿ. ನಿಮಗೆ ಅರ್ಥವಾಗಬಹುದು, ನಿಮ್ಮ ಗಮ್ಯಸ್ಥಾನ ಕೇವಲ ಮತ್ತೊಂದು ನಿಲ್ದಾಣವಷ್ಟೇ, ಅದನ್ನು ಕ್ರಮಿಸುವ ದಾರಿ ಹೆಚ್ಚು ಮಹತ್ತರವಾದದ್ದು ಮತ್ತು ಅದನ್ನು ಆನಂದಿಸುವುದು ಹೆಚ್ಚು ಮುಖ್ಯವಾದದ್ದು ಎಂದು. ಹೋಗಿ! ಆನಂದಿಸಿರಿ, ಆದರೆ ಅಂತರಂಗದ ಪಯಣವನ್ನು.
ಹೊರಗಿನ ಪಯಣ ಒಂದು ಭ್ರಮೆ, ಅದು, ಆಂತರಿಕ ಪಯಣಕ್ಕಿಂತ ಹೆಚ್ಚು ನೈಜವಾಗಿರಲು ಸಾಧ್ಯವಿಲ್ಲ. ಹೊರಗಿನದು ಹೇಗೆ ಅಂದರೆ, ನಿಮ್ಮ ಸುತ್ತಮುತ್ತಲೂ ಸಂಚಾರ ನಡೆಯುತ್ತಿರುತ್ತದೆ, ಆದರೆ ಒಳಗಿನ ಪಯಣದಲ್ಲಿ ನೀವು ನೀವೇ ಸ್ವತಃ ಗಾಡಿಯನ್ನು ಓಡಿಸುತ್ತೀರಿ, ನೀವು ಹಾದಿಯನ್ನು ಬದಲಿಸಬಹುದು, ದಟ್ಟಣಿ ಇರದ ಸಮಯದಲ್ಲಿ ಸಂಚರಿಸಬಹುದು, ಅಥವಾ ದಟ್ಟಣಿ ಇರದ ಇನ್ನೊಂದು ಹೆದ್ದಾರಿಯಲ್ಲಿ ಪಯಣಿಸಬಹುದು.
ನೀವು ತೆಗೆದುಕೊಳ್ಳುವ ಅಂತರಂಗದ ನಿರ್ಧಾರಗಳು ನಿಮ್ಮ ಹೊರಗಿನ ಪ್ರಪಂಚವನ್ನು ಬದಲಿಸುತ್ತದೆ. ಈ ವಸ್ತು ವಿಷಯವನ್ನು ನಾನು ಇಲ್ಲಿಗೆ ನಿಲ್ಲಿಸುತ್ತೇನೆ. ಏಕೆಂದರೆ ಈ ಇ-ಮೇಲ್ ತುಂಬಾ ಉದ್ದವಾಗಿ ಕೇವಲ ಕಣ್ಣು ಹಾಯಿಸುವಂತಾಗಬಾರದು. ನಾನು ಕೆಲವೊಂದು ಬಾಕಿ ಉಳಿದಿರುವ ಕೆಲಸಗಳು ಮುಗಿದ ನಂತರ ನಿಮ್ಮನ್ನೆಲ್ಲಾ ಕಾಣುತ್ತೇನೆ. ಅದು ಈ ವರ್ಷದೊಳಗೆ ಆಗಬಹುದು. ಎರಡು ದಿನಾಂಕಗಳು ನನ್ನ ಮನದಲ್ಲಿದೆ, 9-10-11 ಅಥವಾ 11- 11-11, ಇದು, ನಾನು ಈ ಹಿಂದೆ ತಿಳಿಸಿದ ಸಮಯಕ್ಕಿಂತ ಬಹುತೇಕ ಒಂದು ವರ್ಷ ಮುಂಚೆ.
ನಾನು ನಿಮ್ಮನ್ನೆಲ್ಲಾ ನೋಡಲು ಕಾತುರನಾಗಿದ್ದೇನೆ, ಹಾಗೂ ನಿಮಗೆ ಕೃತಜ್ಞನಾಗಿದ್ದೇನೆ. ನಾನು ಏನನ್ನು ಬಯಸುತ್ತಿದ್ದೇನೋ ಅದು ನನಗೆ ಸಿಕ್ಕಿದೆ. ಅದು ಸಿಕ್ಕಿದ ಮೇಲೆ ನನಗೆ ಅರ್ಥವಾಯಿತು, ನನ್ನನ್ನೇ ನಾನು ಇಚ್ಚಿಸಿದ್ದೆನೆಂದು. ಆ ಸತ್ಯದ ಅರಿವಾದ ಮೇಲೆ ನನಗೆ ಗೋಚರವಾಯಿತು, ನಾನೇ ವಾಸ್ತವಿಕ ಅಭಿವ್ಯಕ್ತಿ ಎಂದು. ಇನ್ನೂ ಹೇಳಬೇಕೆಂದರೆ, ನಾನು ಎಂಬುದು ಕೂಡ ಇದರಲ್ಲಿ ಇಲ್ಲ ಎಂದು. ಇನ್ನು ಕೆಲವು ವಾರಗಳಲ್ಲಿ ನಿಮಗೆ ಮತ್ತೆ ಬರೆಯುತ್ತೇನೆ. ಆಗಸ್ಟ್ ಕೊನೆಯ ಒಳಗೆ ಒಂದು ಖಚಿತವಾದ ತಾರೀಕನ್ನು ತಿಳಿಸುತ್ತೇನೆ.
ನಿಮಗೆಲ್ಲಾ ಮನಸ್ಸಿನ ಶಾಂತಿಯನ್ನು ಹಾರೈಸುತ್ತೇನೆ. ಆದಷ್ಟು ಬೇಗ ನನ್ನಿಂದ ಸುದ್ದಿಯನ್ನು ನಿರೀಕ್ಷಿಸಬಹುದು.
ಈ ಸಂದೇಶವನ್ನು ಪಡೆಯಲು ಯಾರ್ಯಾರು ಇಚ್ಛೆ ವ್ಯಕ್ತಪಡಿಸಿದ್ದಾರೋ ಮತ್ತು ಯಾರಿಗೆ ಇದರಿಂದ ಪ್ರಯೋಜನವಾಗುತ್ತದೆ ಎಂದು ಅನಿಸುತ್ತದೆಯೋ ಅವರಿಗೆಲ್ಲಾ ಈ ಇ-ಮೇಲ್ ಅನ್ನು ಕಳುಹಿಸಿಬಿಡಿ.
ಸ್ವಾಮಿ.
Translated from: My truth
Translated by: Rekha MG
Edited by:
H. R. Ravi Kumar
Retd. Engineer.
Shimoga.
Comments & Discussion
6 COMMENTS
Please login to read members' comments and participate in the discussion.