ನಾನೇ ಯಾಕೆ? ಜೀವನದ ಹಾದಿಯಲ್ಲಿ, ಈ ಪ್ರಶ್ನೆ, ಹಲವಾರು ಜನರನ್ನು ತಟ್ಟುವುದು, ಇದರಿಂದ ಕೆಲವರು ಹೊರದಬ್ಬಲ್ಪಡಬಹುದು, ಉಳಿದವರು ನೆಲಕಚ್ಚಬಹುದು. ಹಲವಾರು ಸಂದರ್ಭಗಳಲ್ಲಿ, ಒಳ್ಳೆಯವರ ಜೊತೆ ಭಯಂಕರವಾದ ಘಟನೆಗಳು ಸಂಭವಿಸುವುದನ್ನು ನೀವೆಲ್ಲಾ ನೋಡಿರಬಹುದು, ಹಾಗೂ ಕೆಟ್ಟವರು ಸಮೃದ್ಧ ಜೀವನ ನಡೆಸುತ್ತಿರುವುದನ್ನು. ಯಾರು ಅತ್ಯಂತ ಕಾಳಜಿಯಿಂದ ತಮ್ಮ ಆರೋಗ್ಯವನ್ನು ನೋಡಿಕೊಂಡಿರುತ್ತಾರೋ, ಕಾಲಾಂತರದಲ್ಲಿ ಘೋರ ಕಾಯಿಲೆಯಿಂದ ಬಳಲುತ್ತಿರುತ್ತಾರೆ, ಇದೂ ವಿರಳವಲ್ಲ.

ಹಲವೊಮ್ಮೆ, ತಮ್ಮ ದೇಹವನ್ನು ಎಲ್ಲಾ ರೀತಿಯಿಂದಲೂ ದುರುಪಯೋಗಗೊಳಿಸಿಯೂ ಕೂಡ ತೊಂಬತ್ತರ ಆರೋಗ್ಯ ಜೀವನವನ್ನು ಆನಂದಿಸುತ್ತಾರೆ. ಕೆಲವರು, ತಮ್ಮ ಸಂಗಾತಿಯೊಂದಿಗೆ ಸದಾ ನಿಷ್ಠಾವಂತರಾಗಿದ್ದರೂ ಕೂಡ ಯಾವುದೇ ಸ್ಪಷ್ಟ ಕಾರಣವಿಲ್ಲದೆ ತೊರೆಯಲ್ಪಡುತ್ತಾರೆ. ಯಾವ ಮನುಷ್ಯ, ನಿಯಮಗಳಂತೆ ಆಡಿದ್ದಾನೋ ಅವನು ಸಂಗಾತಿ ಇಲ್ಲದೆ, ಒಬ್ಬಂಟಿಯಾಗಿ, ದುರಂತವಾಗಬಹುದು – ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ, ಕೆಲವೊಮ್ಮೆ ಆರ್ಥಿಕವಾಗಿಯೂ ಕೂಡ.

ಹಾಗಾದರೆ ಇದೆಲ್ಲಾ ಹೇಗೆ ಸರಿದೂಗುತ್ತದೆ? ಸರಿಯಾದ ಉತ್ತರಕ್ಕೆ, ನಿಖರವಾದ ಪ್ರಶ್ನೆಯೇ ಮೂಲ. ನಾನು ಯಾಕೆ? ಎಂದು ನಕಾರಾತ್ಮಕವಾಗಿ ಕೊರಗುವುದರ ಬದಲು, ನಿಮ್ಮ ಆದರ್ಶ ವ್ಯಕ್ತಿಯ ಜೀವನವನ್ನು ಪರೀಕ್ಷಿಸಿ ಹಾಗೂ ಕೇಳಿ ‘ನಾನು ಯಾಕಿಲ್ಲ?’ ಅಥವಾ ‘ನಾನು ಹೇಗಾಗಬಹುದು?’ ಎಂದು. ನೀವು ನಿಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬೇಕಾದರೆ, ಪ್ರಕೃತಿ ಮಾತೆಯಿಂದ ಬಲವನ್ನು ಪಡೆದುಕೊಳ್ಳಲು ಶುರುಮಾಡಬೇಕು. ದೈವಿಕ ಶಕ್ತಿಯಿಂದ ತುಂಬಿರುವ ಪ್ರಕೃತಿಯ ಬಳಿ ಅಸಾಧಾರಣ ಕೊಡುಗೆಯಿದೆ – ನಿಮ್ಮ ಲೌಕಿಕ ಹಾಗೂ ಆಧ್ಯಾತ್ಮಿಕ ಇವೆರಡೂ ಅಭಿಲಾಷೆಗಳನ್ನು ಪೂರೈಸಿಕೊಳ್ಳಲು. ಆದಾಗ್ಯೂ, ಪ್ರಕೃತಿ ನಿಮಗಾಗಿ ಕೆಲಸ ಮಾಡುವುದಕ್ಕೆ ಮುನ್ನ, ವೈಯಕ್ತಿಕ ಪರಿಸರ ವ್ಯವಸ್ಥೆಯನ್ನು ಬೆಳೆಸಿಕೊಳ್ಳಬೇಕು – ಪ್ರಜ್ಞಾಪೂರ್ವಕವಾಗಿ ಪ್ರಕೃತಿಯ ಪ್ರತಿಕೃತಿಯನ್ನು

ನೀವು ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದರ ವಿಧಾನದಲ್ಲಿ ಯಾವುದೇ ಸಂಘರ್ಷವಿಲ್ಲವೆಂದು ತಿಳಿಯುತ್ತದೆ. ಅದರ ಪ್ರಗತಿಗೆ ಸಹಾಯಕವಾಗುವುದನ್ನು ಸ್ವೀಕರಿಸುತ್ತದೆ ಹಾಗೂ ಅದರ ಪರಿಸರ ವ್ಯವಸ್ಥೆಗೆ ಸೂಕ್ತವಲ್ಲದ್ದನ್ನು ತ್ಯಜಿಸುತ್ತದೆ. ಸರಿಯಾದ ಸಮಯಕ್ಕೆ ಬೀಜವನ್ನು ಬಿತ್ತಿದರೆ ಅದು ಮೊಳಕೆ ಒಡೆಯುತ್ತದೆ. ಇತರ ಸಮಯದಲ್ಲಿ ನಶಿಸುತ್ತದೆ. ನೀವು ಪಾಲಿಥಿನ್ ನಂತಹ ಕೃತಕ ಪದಾರ್ಥಗಳನ್ನು ನೀಡಿ ಅದು ಸ್ವೀಕರಿಸಲ್ಪಡುವುದೂ ಇಲ್ಲ ಅಥವಾ ನಶಿಸಲ್ಪಡುವುದೂ ಇಲ್ಲ; ಪ್ರಕೃತಿ ಕೇವಲ ನಿರಾಕರಿಸುತ್ತದೆ.

ನೀವು ವೈಯಕ್ತಿಕ ಪರಿಸರ ವ್ಯವಸ್ಥೆಯನ್ನು ಬೆಳೆಸಿಕೊಳ್ಳುವುದಕ್ಕೆ ಮೊದಲು, ಸ್ವಲ್ಪ ಸಮಯ ನಿಮ್ಮನ್ನು ನೀವು ವಿಶ್ಲೇಷಿಸಿಕೊಳ್ಳಬೇಕಾಗುತ್ತದೆ. ಯಾವುದು ಚಂದ ಎನ್ನುವುದಕ್ಕಿಂತ, ಯಾವುದು ನಿಮಗೆ ಸೂಕ್ತ ಎಂಬುದು ತಿಳಿದಿರಲಿ. ನಿಮ್ಮಲ್ಲಿ ಯಾವುದು ಒಗ್ಗದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ ಹಾಗೂ ಯಾವುದು ಸರಿಯಾದ ಕ್ರಿಯೆಯನ್ನು ಪ್ರೇರೇಪಿಸುತ್ತದೆ ಎಂದು ಅರ್ಥಮಾಡಿಕೊಳ್ಳಿ. ಏನು ಸಕ್ರಿಯಗೊಳಿಸುತ್ತದೆ ಹಾಗೂ ಏನು ದುರ್ಬಲಗೊಳಿಸುತ್ತದೆ ಎಂಬುದು ನಿಮಗೆ ತಿಳಿದಿರಲಿ. ಇದರ ಪರಿಣಾಮ ನಿಮ್ಮ ಮೇಲೆಯೇ ಆಗುವುದರಿಂದ, ಈ ತರ್ಕದ ವ್ಯಾಯಾಮ ಸಂಪೂರ್ಣ ನಿಮ್ಮ ಮೇಲೇ ಕೇಂದ್ರೀಕೃತವಾಗಿದೆ. ವಿಪರೀತದ ಹಾದಿಯಲ್ಲಿ ಹೋಗಬೇಡಿ ಅಥವಾ ಬೇರೆಯವರಲ್ಲಿ ಏನನ್ನೂ ಬದಲಾಯಿಸಲು ಪ್ರಯತ್ನಿಸಬೇಡಿ. ನಮಗೆ ಸಂಬಂಧಪಟ್ಟ ವಿಷಯ, ವಸ್ತು, ಕಾರಣ ಹಾಗೂ ಫಲಿತಾಂಶ ಎಲ್ಲಾ ನೀವೇ. ಈ ಹಂತದಲ್ಲಿ ಬುದ್ಧಿಶಕ್ತಿಯಿಂದಲಾದರೂ ನಿಮ್ಮನ್ನು ನೀವು ತಿಳಿದುಕೊಳ್ಳುವುದಕ್ಕೆ ಪ್ರಾರಂಭಿಸಿದರೆ, ನೀವು ನಿರ್ಮಾಣಗೊಳ್ಳಲು ತಯಾರಾಗುವಿರಿ.

 ಪ್ರಕೃತಿಯ ಹಾಗೆ, ಸ್ವೀಕರಿಸಿ ಹಾಗೂ ಅದರಂತೆಯೇ, ಸಂತೋಷದತ್ತ ಪ್ರಗತಿಸುವುದನ್ನೆಲ್ಲಾ ಮೊಳಕೆಯೊಡೆಯಲು ಬಿಡಿ, ಹಾಗೂ ಯಾವುದು ಯೋಗ್ಯವಲ್ಲ ಅದನ್ನೆಲ್ಲಾ ನಿರಾಕರಿಸಿ.ಅನುಚಿತ ಋತುವಿನಲ್ಲಿ ಬಿತ್ತಿದ ಬೀಜ ಚಿಗುರದೆ ಹೇಗೆ ನಾಶವಾಗುತ್ತದೋ ಹಾಗೆ, ಸರಿ ಇದ್ದೂ ಸರಿ ಇಲ್ಲದ ವೇಳೆಯಲ್ಲಿ ಕೊಡಲ್ಪಟ್ಟರೆ, ಅದನ್ನು ಹೀರಿಕೊಳ್ಳಲು ಕಲಿಯಿರಿ. ಪ್ರಕೃತಿಯು ನಾಶವಾದ ಬೀಜದ ಯಾವುದೇ ರೀತಿಯ ಕುರುಹನ್ನು ಉಳಿಸುವುದಿಲ್ಲ, ಅದನ್ನೇ ಹೇಳುವುದು, ಹೀರಿಕೊಳ್ಳುವುದು, ಕ್ಷಮಿಸುವುದು ಹಾಗೂ ಮರೆತುಬಿಡುವುದು ಎಂದು. ನೆನಪಿಡಿ, ಪ್ರಕೃತಿಯಂತೆ ನೀವೂ ಕೂಡ ತೆಗಳದಿರಿ. ಅವಳಂತೆಯೇ, ನಿಮಗೆ ಏನಾದರೂ ನೀಡಿದರೆ, ಒಂದಾ ಸ್ವೀಕರಿಸಿ, ಹೀರಿಕೊಳ್ಳಿ ಅಥವಾ ನಿರಾಕರಿಸಿ. ಇವೇ ಮೂರು ಆಯ್ಕೆಗಳು. ನೀವು ಸ್ವತಃ ದುಃಖ ಆಗಲು ಬಿಡದಿದ್ದರೆ ಬೇರೆಯವರು ನಿಮಗೆ ವಿಷಾದವನ್ನುಂಟು ಮಾಡುವುದು ಅಸಾಧ್ಯ.

ದುರದೃಷ್ಟವಶಾತ್ ಇದು ಎಲ್ಲಾ ಸಕಾರಾತ್ಮಕ ಭಾವನೆಗಳಿಗೂ ಅನ್ವಯಿಸುತ್ತದೆ – ನೀವು ಸ್ವತಃ ಸಂತೋಷದಿಂದಿರಲು ಅನುವು ಮಾಡಿಕೊಡದಿದ್ದರೆ ಯಾರೊಬ್ಬರೂ ನಿಮಗೆ ಖುಷಿ ಕೊಡಲು ಸಾಧ್ಯವಿಲ್ಲ. ಪ್ರಕೃತಿ ಎಲ್ಲರಿಗೂ ಸದಾ ತೆರೆದಿದೆ. ಆದರೆ ಅದು ಕೇವಲ ತನ್ನ ಚಲನೆಯನ್ನೇ ಕ್ರಮಿಸುತ್ತದೆ. ನೆನಪಿರಲಿ, ಆದಾಗ್ಯೂ, ಇದು ಕೇವಲ ಬುದ್ಧಿಶಕ್ತಿಯ ವ್ಯಾಯಾಮ: ಇದು ನೇರ ನಿಮ್ಮನ್ನು ನಿಮ್ಮ ಗಮ್ಯಸ್ಥಾನಕ್ಕೆ ಒಯ್ಯುವುದಿಲ್ಲ. ಆದರೂ ಇದು ನಿಮ್ಮನ್ನು ಶಾಂತಿ ಹಾಗೂ ಆನಂದದ ಸ್ಥಿತಿಯನ್ನು ಅನ್ವೇಷಿಸುವಂತಹ ಸರಿಯಾದ ದಾರಿಯಲ್ಲಿ ತೊಡಗಿಸುತ್ತದೆ. ನಿಮ್ಮ ಸತ್ಯವನ್ನು ನೀವು ಆವಿಷ್ಕಾರ ಮಾಡಿದ ಮೇಲೆ, ಇದೆಲ್ಲಾ ಪದವೀಧರರಿಗೆ ಶಿಶುವಿಹಾರದ ಶಿಕ್ಷಣ ಕೊಟ್ಟಂತಿರುತ್ತದೆ.

ನೀವು ಪ್ರಕೃತಿಯ ನಟನೆಯಲ್ಲಿ ಪಾತ್ರಧಾರಿಯಾದಾಗ ಬುದ್ಧಿಶಕ್ತಿಯ ವ್ಯಾಯಾಮದ ಭಾಗವಾಗಿ, ಈ ಕೆಳಕಂಡ ಪಾತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಅದೇ ಪಾತ್ರಕ್ಕೆ ಅಂಟಿಕೊಂಡಷ್ಟೂ, ಆ ಪಾತ್ರವನ್ನು ನಿಭಾಯಿಸುವ ಪ್ರಾವಿಣ್ಯತೆ ಹೆಚ್ಚುತ್ತದೆ. ಕೆಲವೊಮ್ಮೆ ಬದಲಾವಣೆ ಅಗತ್ಯವಾಗುತ್ತದೆ, ಬೇರೆ ಸಮಯದಲ್ಲಿ, ಕೇವಲ ಅನುಕೂಲಕ್ಕಾಗಿ. ನೀವು ಸಿಇಓ ಆಗಿರಬಹುದು, ಆದಾಗ್ಯೂ, ನೀವು ಮಂಡಳಿಗೆ ವರದಿ ಮಾಡಬೇಕು. ಅಥವಾ ನೀವು ನಿರ್ದೇಶಕರಾಗಿದ್ದರೂ ನಿಮ್ಮ ಅರ್ಧಾಂಗಿಯ ಮೌಲ್ಯಮಾಪನದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ನಾನು ೪ ಪಾತ್ರಗಳ ಬಗ್ಗೆ ನಿಮಗೆ ಸ್ಪಷ್ಟಪಡಿಸುತ್ತೇನೆ. ಪ್ರಸ್ತುತ ನೀವು ಯಾವ ಪಾತ್ರವನ್ನು ನಿರ್ವಹಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಹಾಗೂ ನಂತರ ಅಲ್ಲಿಂದ ಕಾರ್ಯ ವಹಿಸಿ. ಅವುಗಳು ಹೀಗಿವೆ:

ಪಶ್ಚಾತಾಪಿ:

ಪಶ್ಚಾತಾಪಿಯ ಪಾತ್ರಗಳನ್ನು ನಿರ್ವಹಿಸುವ ಜನಗಳಿಗೆ ಕೊರತೆಯಿಲ್ಲ. ಇವರು ಪಶ್ಚಾತ್ತಾಪದ ಸ್ಥಿತಿಯಲ್ಲಿ ಪ್ರಕೃತಿಯಿಂದ ಯಾಚಿಸಲು ಶುರುಮಾಡುತ್ತಾರೆ. ಯಾಚಿಸುವುದರಿಂದ ಕೇವಲ ಚಿಲ್ಲರೆಗಳು ಒದಗುತ್ತದೆ, ಹಾಗೂ ಅದನ್ನು ಸಂಗ್ರಹಿಸಲು ಕೂಡ ತೀರಾ ಕರುಣಾಜನಕವಾಗಿ ಕಾಣಬೇಕು. ಸ್ವಾನುಕಂಪದ ವಿನಾಶಕಾರಿ ದಾರಿಯಲ್ಲಿ ಪಶ್ಚಾತಾಪಿಗಳು ನಡೆಯುತ್ತಾರೆ. ನಿರಂತರ ಗೊಣಗಾಡುತ್ತಾ ಹಾಗೂ ತನ್ನ ಬಗೆಗಿನ, ಅದರಲ್ಲೂ ವಿಶೇಷವಾಗಿ ಅರ್ಥಪೂರ್ಣ ಜೀವನ ನಡೆಸಲು ತನ್ನ ಅಸಾಮರ್ಥ್ಯದ ಭ್ರಮೆಯ ನಂಬಿಕೆಗೆ ಅಂಟಿಕೊಳ್ಳಲು ನಿರ್ಧರಿಸಿರುತ್ತಾರೆ. ಪಶ್ಚಾತಾಪಿಗಳ ಶ್ರೇಷ್ಠತೆಯ ಗುರುತು ಎಂದರೆ, ಅವರು ಯಾವಾಗಲೂ ಯಾಚಿಸುತ್ತಿರುತ್ತಾರೆ, ಹಾಗೂ ಎಂದಿಗೂ ಸಂತೋಷದಿಂದ ಇರುವುದಿಲ್ಲ. ಅವರು ಮತ್ತೆಂದೂ ಪ್ರಯತ್ನ ಮಾಡದಿರಲು ಆಯ್ಕೆ ಮಾಡಿಕೊಂಡಿರುತ್ತಾರೆ, ಅದಾಗಲೇ ಪ್ರಯತ್ನ ಮಾಡಿರುವುದಾಗಿ ಅವರು ಭಾವಿಸುತ್ತಾರೆ.

 ಒಂದು ನಿರ್ದಿಷ್ಟ ಹಂತ ಮೀರಿ ಅವರಿಗೆ ಯಾರೂ ಸಹಾಯ ಮಾಡಲು ಆಗುವುದಿಲ್ಲ. ಅವರು ಇನ್ನೊಂದು ಪಾತ್ರವನ್ನು ಆಯ್ಕೆ ಮಾಡಿದಾಗ ಮಾತ್ರ, ತಮ್ಮನ್ನು ಮೇಲೆತ್ತಿಕೊಳ್ಳಲು ಸಿದ್ಧರಾಗುತ್ತಾರೆ.

ಪಶ್ಚಾತಾಪಿ ಯಾವಾಗಲೂ ಬೆರಗಾಗುತ್ತಾನೆ, ನಾನೇ ಯಾಕೆ? ಎಂದು, ಹಾಗೂ ಬೇರೆಯವರು ವಂಚನೆಯಿಂದ ಅಥವಾ ಅದೃಷ್ಟದಿಂದ ಯಶಸ್ವಿಗಳಾಗಿದ್ದಾರೆಂದು. ಒಂದು ಗಮನಾರ್ಹ ವಿಷಯವೆಂದರೆ; ಈ ಪಾತ್ರವನ್ನು ಯಾರೂ ನಿಭಾಯಿಸಲು ಇಚ್ಛಿಸುವುದಿಲ್ಲ. ಇಂಥವರು ಆಗಾಗ ನಕಾರಾತ್ಮಕತೆ ಹಾಗೂ ಪಶ್ಚಾತ್ತಾಪಕ್ಕೆ ಎಡೆ ಮಾಡಿಕೊಟ್ಟಿರುತ್ತಾರೆ; ಎಷ್ಟೆಂದರೆ, ಅವರು ಸಹಾಯ ಪಡೆಯಲು ಕೂಡಾ ನಿರಾಕರಿಸುತ್ತಾರೆ.

ಕೆಲವೊಂದು ವಿರಳ ಪ್ರಕರಣಗಳಲ್ಲಿ ಮಾತ್ರ ಪ್ರಾರಬ್ಧದಿಂದ, ಬಲವಂತದಿಂದ ಈ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.ಕೆಲವೊಂದು ಪೌರಾಣಿಕ ದಂತಕತೆಗಳನ್ನು ಹೊರತುಪಡಿಸಿದರೆ, ಭಗವಂತ ಅಥವಾ ಪ್ರಕೃತಿ – ಇವೆರಡು ಪದಗಳನ್ನು ನೀವು ಆರಾಮಾಗಿ ಅದಲು-ಬದಲು ಮಾಡಬಹುದು – ಪಶ್ಚಾತಾಪಿಯನ್ನು ಪಾರುಮಾಡಲು ಬರುವುದಿಲ್ಲ. ನೀವು ನೀರಿನಲ್ಲಿ ಮುಳುಗುತ್ತಿದ್ದರೆ ಹಾಗೂ ನಿಮಗೆ ಈಜು ಬಾರದಿದ್ದರೆ, ಹಸುಗಳು ಮನೆಗೆ ಹಿಂದಿರುಗುವ ತನಕ ಬೇಡಿಕೊಳ್ಳಬಹುದು, ಯಾವ ದೇವರೂ ಇದ್ದಕ್ಕಿದ್ದಂತೆ ಗೋಚರಿಸುವುದಿಲ್ಲ. ಪ್ರಕೃತಿಯನ್ನು ಹೇಗೆ ಆಹ್ವಾನಿಸಬಹುದು ಎಂದು ಗೊತ್ತಿದ್ದರೆ ಮಾತ್ರ, ಕಷ್ಟಕಾಲದಲ್ಲಿ ಅವಳು ನಿಮ್ಮ ಸಹಾಯಕ್ಕೆ ಬರುವಂತೆ ಮಾಡಬಹುದು.

ಪ್ರಕೃತಿಯನ್ನು ಯಾಚಿಸುವುದರ ಬದಲು, ಅದರ ಸಾಮರ್ಥ್ಯವನ್ನು ಉಪಯೋಗಿಸಿ ಬೇರೆಯವರಿಗೆ ಸಹಾಯ ಮಾಡಿದ ಶ್ರೇಷ್ಠ ಯೋಗಿಗಳು, ತಪಸ್ವಿಗಳು, ಭಕ್ತರು ಹಾಗೂ ದಿವ್ಯ ಜೀವಿಗಳ ಸಾಕಷ್ಟು ಉದಾಹರಣೆಗಳಿವೆ. ಪ್ರಾರ್ಥನೆಯನ್ನು ಯಾಚಿಸುವುದಕ್ಕೆ ಹೋಲಿಸಬಾರದು. ಸರಿಯಾದ ಪ್ರಯತ್ನವಿಲ್ಲದ ಹಾಗೂ ಭಾವರಹಿತವಾದ ಪ್ರಾರ್ಥನೆಯು ಯಾಚನೆಯಂತೆ ಖಂಡಿತಾ ಅನ್ನಿಸುತ್ತದೆ. ಕೆಲವೊಂದು ನಿಯಮಗಳನ್ನು ಅನುಸರಿಸಿದರೆ ಪ್ರಾರ್ಥನೆಯೂ ಅಪೇಕ್ಷಿತ ಫಲವನ್ನು ಕೊಡುತ್ತದೆ. ಇದನ್ನು ಇನ್ನೊಮ್ಮೆ ವಿಷದೀಕರಿಸುತ್ತೇನೆ; ಇದು ಉತ್ಕೃಷ್ಟವಾದ ಹಾಗೂ ಸುಂದರವಾದ ವಿಷಯ, ಇದನ್ನು ನಿರೂಪಿಸುವಲ್ಲಿ ನನಗೆ ಹರ್ಷವೆನಿಸುತ್ತದೆ. ಪ್ರಸ್ತುತ ವಿಷಯಕ್ಕೆ ಮರಳಿದರೆ, ಏನೇ ಆಗಲಿ, ಪಶ್ಚಾತಾಪಿ ಆಗುವುದರಿಂದ ದೂರವಿರಿ. ಈ ಪಾತ್ರದಲ್ಲಿ ಬರೀ ಹೊಟ್ಟೆಬಾಕತನವಿದೆ, ಘನತೆ ಏನೂ ಇಲ್ಲ. ಇದರ ಬದಲು, ಕೆಳಕಂಡ ಮೂರರಲ್ಲಿ ಒಂದನ್ನು ಆಯ್ದುಕೊಳ್ಳಿ.

ಶ್ರಮಿಕ:

 ಬಹುಪಾಲು ಜನರು ಈ ಪಾತ್ರವನ್ನು ಅಭಿನಯಿಸುತ್ತಾರೆ. ಅವರ ಬಳಿಗೆ ಬಂದದ್ದನ್ನೆಲ್ಲಾ ಸ್ವೀಕರಿಸುತ್ತಾರೆ; ಅದು ಧರ್ಮ, ಸಿದ್ಧಾಂತಗಳು, ನಿಯಮಗಳು, ಬೋಧನೆಗಳು, ವಿಧಾನಗಳು, ಸಂಬಂಧಗಳು; ಶ್ರಮಿಕ ಪ್ರತಿಯೊಂದನ್ನೂ ಸ್ವೀಕರಿಸುತ್ತಾನೆ. ಹೆಚ್ಚಿನ ಸಮಯ, ವಿರೋಧವಿಲ್ಲದೆ. ಸತ್ಯವನ್ನು ಹುಡುಕುವ ಪ್ರಯತ್ನ ಅಥವಾ ತಿದ್ದಿಕೊಳ್ಳುವ ಸಾಹಸ ಕೂಡ ಮಾಡುವುದಿಲ್ಲ. ತನ್ನದೇ ಆದ ತಪ್ಪು ಕಲ್ಪನೆಯ ಭದ್ರತೆಯಲ್ಲಿ ಸಾಂತ್ವನ ವಲಯವನ್ನು ಕಂಡುಕೊಂಡಿದ್ದಾನೆ. ಅವನಿಗೆ ಪ್ರಪಂಚದ ಭ್ರಮೆಯ ಅಥವಾ ವಾಸ್ತವಿಕತೆಯ ಬಗ್ಗೆ ಚಿಂತೆಯಿಲ್ಲ. ಅವನ ದೃಷ್ಟಿಯಿಂದ ಅವನು ನಿಶ್ಚಿಂತ. ಬಾಡಿಗೆಯದ್ದೇ ಆಗಲಿ, ಅವನಿಗೆ ತಲೆಯ ಮೇಲೆ ಛಾವಣಿ ಇದೆ, ಊಟ ಹಾಗೂ ಅವನ ಭಾಗದ ದೈಹಿಕ ಆನಂದ ಸಿಗುತ್ತಿದೆ.

ದಿನಂಪ್ರತಿ – ತನ್ನ ನಿವೃತ್ತಿಯ ಕೊನೆಯ ದಿನದ ತನಕ ಕೆಲಸಕ್ಕೆ ಹಾಜರಾಗುತ್ತಾನೆ. ರಾತ್ರಿ ಮನೆಗೆ ಹೋಗುತ್ತಾನೆ, ಊಟ ಮಾಡುತ್ತಾನೆ, ತನ್ನ ದೇಹ ಅನುವು ಮಾಡಿಕೊಟ್ಟಷ್ಟು ಸಂಯೋಗಿಸುತ್ತಾನೆ. ಹಾಗೂ ಕೆಲವು ಧರ್ಮಗಳನ್ನು ಕಣ್ಣುಮುಚ್ಚಿ ಪಾಲಿಸುತ್ತಾನೆ. ಬಾವಿಯೊಳಗಿನ ಕಪ್ಪೆಗೆ ಹೊರಗಿನ ಸಮುದ್ರದಿಂದ ಏನು ವ್ಯತ್ಯಾಸವಾಗುತ್ತದೆ. ಶ್ರಮಿಕ ಬಹು ಉತ್ತಮ ಪೋಷಕನಾಗುತ್ತಾನೆ. ಪ್ರಕೃತಿ, ಶ್ರಮಿಕನಿಗೆ ಬೆಂಬಲವಾಗಿರುತ್ತದೆ. ಏಕೆಂದರೆ, ಅವನು ನಿಯಮದ ಪ್ರಕಾರ ಆಡುತ್ತಾನೆ, ಹಾಗೂ ಅವನ ಕರ್ತವ್ಯ ಮಾಡುತ್ತಿರುತ್ತಾನೆ. ಇದರ ಫಲಿತಾಂಶ, ತನ್ನ ಪಾತ್ರವನ್ನು ಎಲ್ಲಿಯ ತನಕ ಪರಿಣಾಮಕಾರಿಯಾಗಿ ನಿಭಾಯಿಸುತ್ತಾನೋ ಅಲ್ಲಿಯವರೆಗೆ ತನ್ನ ಅಧಿಕಾರವನ್ನು ಅನುಭವಿಸುತ್ತಾನೆ. ಈ ಪಾತ್ರದಲ್ಲಿ ಸೊಗಸೂ ಇಲ್ಲ, ಉತ್ತೇಜನವೂ ಇಲ್ಲ.

ಶ್ರಮಿಕ ಜೀವಿಸುವುದಿಲ್ಲ, ಸುಮ್ಮನೆ ಜೀವನ ‌‌ನೆಡೆಸುತ್ತಾನೆ. ಅವನು ಜೀವನದ ಸಿರಿಯನ್ನು ಅನುಭವಿಸಿದ ದಿನ, ಅಥವಾ ನ್ಯಾಯ ಸಮ್ಮತವಲ್ಲ ಎಂದೆನಿಸುವ ಕೊರತೆಯನ್ನು ಅನುಭವಿಸಿದಾಗ, ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಈ ಪಾತ್ರವನ್ನು ಮುಂದುವರಿಸಲು ನಿರಾಕರಿಸುತ್ತಾನೆ. ಪ್ರಾಯಶಃ ಪ್ರತಿಯೊಬ್ಬರೂ ಒಮ್ಮೆಯಾದರೂ ತಮ್ಮ ಜೀವನದಲ್ಲಿ ಈ ಪಾತ್ರವನ್ನು ವಹಿಸುತ್ತಾರೆ. ಕೆಲವರು ತಮ್ಮ ಸೌಲಭ್ಯ ಕೇಂದ್ರದೊಳಗೆ ಬಂದಿಯಾಗುತ್ತಾರೆ, ಹಾಗೂ ಕೆಲವರು ತಮ್ಮ ವ್ಯಾಪ್ತಿಮಿತಿಯನ್ನು ಬಿಟ್ಟು ಮುಕ್ತವಾಗಿ ಓಡಾಡುತ್ತಾರೆ. ಹೊಸತನವನ್ನು ಕಂಡುಕೊಂಡವರು ಕೆಳಕಂಡ ಪಾತ್ರಗಳಲ್ಲಿ ಒಂದನ್ನು ನಿಭಾಯಿಸುತ್ತಾರೆ.

ಬಲ್ಲಿದ:

ಯಾವುದೋ ಒಂದು ಗಳಿಗೆಯಲ್ಲಿ, ಪ್ರಾಯಶಃ, ಆಂತರಿಕ ಜಾಗೃತಿಯಿಂದ, ಶ್ರಮಿಕ, ಜೀವನದ ಒಂದು ಮುಖ್ಯವಾದ ಪ್ರಶ್ನೆಯನ್ನು ತನ್ನಲ್ಲೇ ಕೇಳಿಕೊಳ್ಳುತ್ತಾನೆ – ‘ನನ್ನ ಜೀವನವನ್ನು ಇದಕ್ಕಿಂತಲೂ ಉತ್ತಮವಾಗಿ ನಡೆಸಬಹುದೇ?’ ಎಂದು. ಈ ಪ್ರಶ್ನೆಯನ್ನು ಬೆನ್ನಟ್ಟಿದಾಗ ಮುನ್ನುಗ್ಗುವುದು ಸಾಧ್ಯವಾಗುತ್ತದೆ. ಬಲ್ಲಿದ ಹೊಸದಾಗಿ ಕಂಡುಕೊಂಡ ವ್ಯಕ್ತಿತ್ವವನ್ನು ಬೆಳೆಸಲು ಆರಂಭಿಸುತ್ತಾನೆ. ಕೇವಲ ಮುಖಬೆಲೆಯನ್ನು ಅಂಗೀಕರಿಸದೆ ತನ್ನದೇ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಆರಂಭಿಸುತ್ತಾನೆ. ಕಾಲಕ್ರಮೇಣ, ಪ್ರಶ್ನಿಸುವ ಸಾಮರ್ಥ್ಯವನ್ನು, ಅಭಿವೃದ್ಧಿ ಹಾಗೂ ಪೋಷಣೆ ಮಾಡುವುದನ್ನು ಅಭ್ಯಸಿಸುತ್ತಾನೆ. ಶ್ರಮಿಕನಿಗಿಂತ ಬಲ್ಲಿದನ ಜೀವನ, ಚಟುವಟಿಕೆ ಹಾಗೂ ಉತ್ಸಾಹಭರಿತವಾಗಿರುತ್ತದೆ. ಬಲ್ಲಿದನದು ಕ್ಷಣಿಕವಾದ ಪಾತ್ರ. ಅತ್ಯಧಿಕ ದೃಢತೆ ಇದ್ದರೆ ಮುಂದಿನ ಹಂತಕ್ಕೆ ಹೋಗುತ್ತಾನೆ ಇಲ್ಲದಿದ್ದರೆ ಪುನಃ ಶ್ರಮಿಕನ ಕಡೆಗೆ. ಸಕಾರಾತ್ಮಕವಾಗಿ ನೋಡಿದರೆ, ಅವನು ಪುನಃ ಶ್ರಮಿಕನಾದರೂ ಕೂಡ ಮತ್ತೆ ಅವನು ಅವನಾಗಿಯೇ ಉಳಿಯುವುದಿಲ್ಲ. ಅವನು ಗಮನಾರ್ಹನಾಗುತ್ತಾನೆ.

ತನ್ನ ಪ್ರಯತ್ನದಲ್ಲಿ ಪ್ರಕೃತಿಯ ಸಹಾಯ ಬೇಕು, ಎಂದು ಬಲ್ಲಿದನಿಗೆ ಅರ್ಥವಾಗುತ್ತದೆ – ಏಕೆಂದರೆ, ಸೂಕ್ತವಾಗಿರುವುದು ಮಾತ್ರ ಜೀವಿಸುವುದು. ಅವನು ಕೇವಲ ಜೇನು ನೊಣವಾಗಿರಲು ಇಷ್ಟಪಡುವುದಿಲ್ಲ, ಅವನು ರಾಣಿ ಜೇನಾಗಲು ಬಯಸುತ್ತಾನೆ. ಮುಂದುವರೆಯುತ್ತಾ ಹೋದಂತೆ, ವಿಶೇಷವಾಗಿ ದಕ್ಷತೆಯಿಂದ, ಬಲ್ಲಿದ, ಹೆಚ್ಚಿನ ಸಂತೋಷವನ್ನು ಅನುಭವಿಸಲು ಆರಂಭಿಸುತ್ತಾನೆ. ಅಡೆತಡೆಗಳೆಲ್ಲಾ ತನ್ನಷ್ಟಕ್ಕೆ ತಾನೇ ತೆರವುಗೂಳ್ಳುತ್ತಾ ಹೋಗುವುದನ್ನು ಗಮನಿಸುತ್ತಾನೆ – ಏನಾದರೂ, ಹೇಗಾದರೂ ಯಾವಾಗಾದರೂ ಹಾಗೂ ಎಲ್ಲಾದರೂ, ಅಗತ್ಯದಂತೆ ಹೊಂದಿಕೊಳ್ಳುತ್ತಾ, ಅಳವಡಿಸಿಕೊಳ್ಳುತ್ತಾ, ತ್ಯಜಿಸುತ್ತಾ, ಗ್ರಹಿಸುತ್ತಾ. ಈ ಅನ್ವೇಷಕನನ್ನು ಗರಿಮೆಯ ಕಿರೀಟ ಎದುರು ನೋಡುತ್ತಿರುತ್ತದೆ.

ಗರಿಷ್ಠ:

ಗರಿಷ್ಠ ತನ್ನ ಸತ್ಯಾನ್ವೇಷಣೆ ಮಾಡಿಕೊಂಡಿದ್ದಾನೆ. ಅವನು ಸಂಪೂರ್ಣವಾಗಿ ಅರಿತಿದ್ದಾನೆ, ಕೇವಲ ದೈಹಿಕ ಶ್ರಮದಿಂದ ಅಸಾಧಾರಣ ಫಲಿತಾಂಶ ದೊರೆಯುವುದಿಲ್ಲ ಎಂದು. ಯಾವುದೇ ಗುರಿಯ ಯಶಸ್ಸಿಗೆ ಹಲವಾರು ಅಂಶಗಳು ಹಾಗೂ ಶಕ್ತಿಗಳು ಕೆಲಸ ಮಾಡುತ್ತಿರುತ್ತವೆ – ಇದರಲ್ಲಿ ಬಹುತೇಕ ತೆರೆಮರೆಯಲ್ಲಿ, ಅಗೋಚರವಾಗಿ, ಹಾಗೂ ಗ್ರಹಿಸಲಸದಳವಾಗಿ, ವಿವರಿಸಲಾಗದಂತೆ ಇರುತ್ತದೆ. ಗರಿಷ್ಠನು ಸಹಾನುಭೂತಿಗಳಿಸಿದ್ದಾನೆ, ಬಹುಶಃ ವಾಸ್ತವವಾಗಿ ಪ್ರಕೃತಿಯ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದಾನೆ.

 ಪ್ರಕೃತಿಯು ತನ್ನ ಶಕ್ತಿಯನ್ನು ಗರಿಷ್ಠನಿಗೆ ಹರಿಸಿ, ಅವನ ಮೂಲಕ ಮಾನವಕುಲದ ಸೇವೆ ಹಾಗೂ ಅಸಂಖ್ಯಾತ ಜನರಿಗೆ ಸಹಾಯವನ್ನು ಮಾಡಿಸುತ್ತಾಳೆ. ಇವನು ಕೇವಲ ಭಗವಂತನ ಉಪಕರಣವಾಗಿ ಉಳಿಯದೆ, ಪ್ರಕೃತಿಯ ಕಾರ್ಯಾಚರಣೆಯ ಪ್ರತಿರೂಪವಾಗುತ್ತಾನೆ. ಅವನು ಪ್ರಾಯಶಃ ತನ್ನ ಎಲ್ಲಾ ಕೆಲಸಗಳನ್ನು ಶುದ್ಧ ಸಂಕಲ್ಪದಿಂದ, ಕೇವಲ ತನ್ನ ಇಚ್ಛಾ ಶಕ್ತಿಯಿಂದ ಹಾಗೂ ಅದನ್ನು ತನ್ನ ದಿವ್ಯ ಪ್ರಭೆಯ ಮೂಲಕ ಬ್ರಹ್ಮಾಂಡಕ್ಕೆ ಪ್ರಕಟಿಸುವುದರ ಮೂಲಕ ನಿರ್ವಹಿಸಿಕೊಳ್ಳುತ್ತಾನೆ. ಅವನ ಧ್ವನಿ ಹಾಗೂ ಅವನು ಉಚ್ಚರಿಸುವ ಪ್ರತಿಯೊಂದು ಶಬ್ದವೂ, ಅವನ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬನ ಹೃದಯವನ್ನು ಭೇದಿಸುವ ಸರ್ವೋಚ್ಚ ಪವಿತ್ರ ಶಬ್ದವಾಗುತ್ತದೆ. ಅವನು ತನ್ನ ಸಹಜ ಸ್ವಾಭಾವಿಕತೆಯನ್ನು ಕಂಡುಕೊಂಡಿದ್ದಾನೆ, ತಂತಾನೇ ಎಂಬಂತೆ ಅತೀತ ಜ್ಞಾನ ಚಿಮ್ಮುತ್ತಿರುತ್ತದೆ. ಅವನು ಉನ್ನತ ಹಾಗೂ ದೈವಿಕ ಸಾಮ್ರಾಜ್ಯಕ್ಕೆ ಚಕ್ರವರ್ತಿಯಾಗುತ್ತಾನೆ – ಜನಗಳ ಹೃದಯಕ್ಕೆ.

ಗರಿಷ್ಠನಾಗುವುದಕ್ಕೆ ಏನು ಮಾಡಬೇಕು? ಉತ್ತರ ಇಲ್ಲಿದೆ; ಸಂಕ್ಷಿಪ್ತತೆ ನನ್ನ ಕೌಶಲ್ಯವಲ್ಲ, ಚಿಕ್ಕದಾಗಿರಿಸಲು ಪ್ರಯತ್ನಿಸುತ್ತೇನೆ.

೧. ನೈತಿಕತೆ: ನಿಮ್ಮ ನುಡಿ, ಕೆಲಸ ಹಾಗೂ ಯೋಚನೆಗಳಲ್ಲಿ ನೀತಿಯನ್ನು ಬೇರೂರಿಸಿ

೨. ವೈರಾಗ್ಯ: ಪ್ರಾಪಂಚಿಕ ವಿಲಾಸಗಳಲ್ಲಿ ಉದಾಸೀನತೆಯಿಂದಿರಿ

೩. ಮಾರ್ಗ: ನಿಮ್ಮ ಪಥವನ್ನು ಆಯ್ಕೆ ಮಾಡಿಕೊಳ್ಳಿ – ಭಕ್ತಿ ಅಥವಾ ಜ್ಞಾನದಿಂದ ಪ್ರಾರಂಭಿಸಿ

೪. ಶ್ರದ್ಧೆ: ನೀವು ಆಯ್ದುಕೊಂಡ ಮಾರ್ಗಕ್ಕೆ ಸಂಪೂರ್ಣ ಬದ್ಧರಾಗಿ

೫. ಪ್ರಮಾಣ: ನಿಮ್ಮ ದೃಷ್ಟಿಕೋನವನ್ನು ನಿಮ್ಮ ನೇರ ಅಪ್ರಚೋದಿತ ಅನುಭವದಿಂದ ರಚಿಸಿರಿ, ಬುದ್ಧಿಶಕ್ತಿಯಿಂದಲ್ಲ

೬. ತಪಸ್ಸು: ಕೊನೆ ಮುಟ್ಟುವ ತನಕ, ತಾಳ್ಮೆಯಿಂದ ಹಾಗೂ ದಕ್ಷತೆಯಿಂದ ಪ್ರಯತ್ನಶೀಲರಾಗಿರಿ

೭. ಸಮಾಧಿ: ಸತ್ಯಕ್ಕೆ ತೆರವು ಮಾಡಿ, ನಿಮ್ಮದೇ ಸತ್ಯಕ್ಕೆ, ನಿಮ್ಮ ಮೇಲೆಯೇ ಸ್ಫುರಿಸಲು

೮. ಅನುಭವ: ನಿಮ್ಮ ಅನುಭವವನ್ನು ಪುನರಾವರ್ತಿಸಲು ಆಗುವ ತನಕ ಮುಂದುವರಿಸಿ

೯. ತುರೀಯಾ: ಶಾಶ್ವತವಾಗಿ ಹಾಗೂ ಮುನ್ನುಗ್ಗುತ್ತಿರುವ ಅತ್ಯದ್ಭುತ ಆನಂದವನ್ನು ಅನುಭವಿಸುವುದು ಹಾಗೂ ಅದರಲ್ಲಿ ಜೀವಿಸುವುದನ್ನು ಕಲಿಯಿರಿ

೧೦. ಸಮರ್ಪಣೆ: ನಿಮ್ಮ ಜೀವನವನ್ನು ಇನ್ನೊಬ್ಬರ ಸಹಾಯಕ್ಕಾಗಿ ಸಮರ್ಪಿಸಿ, ಇದರಿಂದ ನೀವು ಇತರ ಅನ್ವೇಷಕರಿಗೆ ಸಹಾಯ ಮಾಡಬಹುದು

ಕೊಡುವುದರಲ್ಲಿರುವ ಸಂತೋಷ ಬೇರೆಯದೆಲ್ಲವನ್ನೂ ಮೀರಿದ್ದು.

ಶಾಂತಿ,

ಸ್ವಾಮಿ.

Translated from: Nature and You

Edited by: H. R. Ravi Kumar, Retd. Engineer, Shimoga.

Image inspired by(copied from😛) https://youtu.be/I0a-I9sD__A