ಒಬ್ಬ ಓದುಗನ ಪ್ರಶ್ನೆ ಹೀಗಿದೆ:

ಪ್ರಣಾಮ ಸ್ವಾಮೀಜಿ,
ನಿಮ್ಮ ಬ್ಲಾಗ್ ಗಳನ್ನು ಓದುವ ಅವಕಾಶ ಸಿಕ್ಕಿರುವುದು, ನನ್ನ ಪ್ರಾರ್ಥನೆಗಳಿಗೆಲ್ಲಾ(ಭಾಗಶಃ) ಉತ್ತರ ಸಿಕ್ಕಿದಂತೆ. ನನ್ನಲ್ಲಿ ಕೆಲವೊಂದು ಪ್ರಶ್ನೆಗಳಿವೆ.

  1. ಸಂತೋಷ ಎಂದರೇನು?
  2. ಸಂತೋಷವನ್ನು ಅನ್ವೇಷಿಸುವುದು ಹೇಗೆ?
  3. ಸಂತೋಷದಿಂದಿರಲು ಏನನ್ನು ತ್ಯಜಿಸಬೇಕು?
  4. ಸಂತೋಷದಿಂದಿರಲು ಏನೇನು ತ್ಯಜಿಸಬಾರದು?

 ಜೀವನದ ಈ ಘಟ್ಟದಲ್ಲಿ,(ಇದು ಒಂದು, ಸಾವು ಮತ್ತು ಬದುಕಿನ ಪ್ರಶ್ನೆ ಅನಿಸುತ್ತಿದೆ) ಈ ಸಂದೇಹಗಳನ್ನು ನಿವಾರಿಸಲು ಹಾಗೂ ಮುಂದಿನ ದಾರಿ ತೋರಿಸಲು ನಿಮ್ಮ ಮಾರ್ಗದರ್ಶನ ಕೋರುತ್ತಿದ್ದೇನೆ. ಪ್ರಣಾಮಗಳು.

  1. ಹೊರಗಿನ ವಿದ್ಯಮಾನಗಳಿಂದ ಪ್ರೇರಿತವಾದ ಹಾಗೂ ಪಡೆದ, ಮಿಥ್ಯಾ ಸಂತೋಷವು ಇಂದ್ರಿಯಗಳನ್ನು ತೃಪ್ತಿಪಡಿಸುವಂತದ್ದಾಗಿರುತ್ತದೆ. ಇದರ ಇನ್ನೊಂದು ಮುಖ, ದುಃಖ. ನಿಜವಾದ ಸಂತೋಷ ಅಂದರೆ ಆನಂದ, ಇದು ಮನಸ್ಸಿನ ಸಹಜಸ್ಥಿತಿ. ಮನಸ್ಸಿನ ಸಹಜ ಸ್ವಭಾವವೆಂದರೆ ಶುದ್ಧ ಆನಂದ.
  2. ಸಂತೋಷದ ಅನ್ವೇಷಣೆಗೆ ಎಲ್ಲಾ ಕಾಮನೆಗಳನ್ನೂ ಬಿಡಬೇಕಾಗುತ್ತದೆ, ಅಥವಾ ನೀವು ಭಕ್ತಿಯಲ್ಲಿ ದೃಢವಾಗಿ ನೆಲೆಗೊಂಡಿದ್ದರೆ, ನಿಮ್ಮ ಇಷ್ಟ ದೇವರಲ್ಲಿ ಸಂಪೂರ್ಣ ಶರಣಾಗತಿ, ಅಥವಾ ನೀವು ಧ್ಯಾನ ಮಾರ್ಗದಲ್ಲಿದ್ದರೆ ಮನಸ್ಸಿನ ಹತೋಟಿ.  ಈ ಮೂರೂ ಒಂದಕ್ಕೊಂದು ಬೆಸೆದುಕೊಂಡಿವೆ. ನೀವು ಬೇರೆಯವರಿಗೆ ಎಷ್ಟು ಸಂತೋಷ ಕೊಡುವಿರಿ, ಅದಕ್ಕಿಂತಲೂ ಹೆಚ್ಚು, ಬೇರೆಯವರಿಂದ ಪಡೆಯುವಿರಿ. ನಿಮ್ಮಿಂದ ಪಡೆದವರೇ ನಿಮಗೆ ನೀಡುತ್ತಾರೆ ಎಂದೆಲ್ಲಾ, ಬೇರೆ ಯಾರ ಮೂಲಕವಾದರೂ ಭಗವಂತ ನಿಮಗೆ ಹಲವು ಪಟ್ಟು ಸಂತೋಷವನ್ನು ನೀಡುತ್ತಾನೆ. ಒಮ್ಮೆ ನೀವು ಆಂತರಿಕವಾಗಿ ತಿರುಗಿದರೆ, ಬಾಹ್ಯ ವಿದ್ಯಮಾನಗಳ ಪ್ರಭಾವಕ್ಕೆ ಸ್ವಲ್ಪವೂ ಒಳಗಾಗದೆ, ನೀವು ಸದಾ ಸಂತೋಷದ ಸ್ಥಿತಿಯಲ್ಲಿರುವಿರಿ. ಇದನ್ನು ನನ್ನ ಸ್ವಂತ ಅನುಭವದಿಂದ ಹೇಳುತ್ತಿದ್ದೇನೆ.
  3. ನಿಮ್ಮ ಇಚ್ಛಾಶಕ್ತಿಯನ್ನು ಹಾಗೂ ಜಾಗೃತಿಯನ್ನು ದುರ್ಬಲಗೊಳಿಸುವ, ಮತ್ತು ನಿಮಗೆ ದುಃಖ ತರುವ ಎಲ್ಲಾ ಭಾವನೆಗಳನ್ನೂ ನೀವು ತೊರೆಯಬೇಕು. ಅದು ಅಭ್ಯಾಸದಿಂದ ಬರುತ್ತದೆ. ನೀವು ಪ್ರಯತ್ನಿಸಲು ಸಿದ್ಧರಿದ್ದರೆ ಫಲಿತಾಂಶ ಕಾಣುವಿರಿ.
  4. ಸಂತೋಷದ ಅನ್ವೇಷಣೆಯಲ್ಲಿ ನೈತಿಕತೆಯನ್ನು ಎಂದೂ ತೊರೆಯಬಾರದು. ನೈತಿಕತೆ ಇಲ್ಲದೆ ಮಾಡಿದ ಕೆಲಸದಿಂದ ದೊರೆತ ಸಂತೋಷ, ಯಾವಾಗಲೂ ಹುಸಿ, ಭ್ರಮೆ ಹಾಗೂ ನುಣುಚಿ ಹೋಗುವ ಸಂತೋಷವಾಗಿರುತ್ತದೆ.

ಸಂತೋಷವೆನ್ನುವುದು ಒಬ್ಬ ವ್ಯಕ್ತಿಯ ಜೊತೆಗೆ ಪರಸ್ಪರ ಕೊಟ್ಟು ಪಡೆಯುವ ವ್ಯವಸ್ಥೆಯಲ್ಲ. ಬದಲಿಗೆ, ಅದು ಭಗವಂತನ ಜೊತೆಗಿನದ್ದು. ನೀವು ಬೇರೆಯವರನ್ನು ಸಂತೋಷಗೊಳಿಸಿಲು ನಿರ್ಧರಿಸಿದರೆ, ಆ ಪರಮಾತ್ಮ ನಿಮಗೆ ಶಾಂತಿ ಹಾಗೂ ಸಂತೋಷವನ್ನು ಅನುಗ್ರಹಿಸುತ್ತಾನೆ. ಮತ್ತು ಇವೆರಡೂ ಸಾಕ್ಷಾತ್ಕಾರಕ್ಕೆ ಅಥವಾ ಯಾವುದೇ ಆಧ್ಯಾತ್ಮಿಕ ಸಾಧನೆಗೆ ತುಂಬಾ ಮುಖ್ಯವಾಗಿದೆ.

ಒಬ್ಬ ವ್ಯಕ್ತಿಯ ಸಂತೋಷ ಯಾವುದರಿಂದ ನಾಶವಾಗುವುದು ಎಂದು ಅರ್ಥಮಾಡಿಕೊಳ್ಳಲು ದಯವಿಟ್ಟು ‘ಹಿಮಾಲಯದೆತ್ತರದ ನಿರೀಕ್ಷೆಗಳು‘ ಮತ್ತೊಮ್ಮೆ ಓದಿ. 

ಹರೇ ಕೃಷ್ಣ. 
ಸ್ವಾಮಿ.

Translated from: The Pursuit of Happiness

Edited by: H. R. Ravi Kumar, Retd. Engineer, Shimoga.

Painting inspired by(copied from😛) https://pngtree.com/freepng/hand-drawn-simple-daisy-bouquet_5409554.html