ನಿಮಗೆ ಗೊತ್ತಾ, ಎಲ್ಲರೂ ಕಣ್ಣಿಗೆ ಕಾಣದ ಭಾರವನ್ನು ಹೊತ್ತಿರುತ್ತಾರೆ. ಅದು ಕಣ್ಣಿಗೆ ಕಾಣದಿರುವುದರಿಂದ, ನೀವು ಆ ಭಾರದ ಅರಿವಿಲ್ಲದೆ ಹಾಗೂ ಅದು ನಿರಂತರ ಅಧಿಕವಾಗುತ್ತಿರುವುದರ ಗಮನವಿಲ್ಲದೆ ಇರುತ್ತೀರಿ. ನಿಮಗೆ ನೆನಪಿರುವ ಕ್ಷಣದಿಂದ ಇಲ್ಲಿಯವರೆಗೆ ನೋಡಿದರೆ, ನಿಮ್ಮ ಅಂತಃಪ್ರಜ್ಞೆಯಲ್ಲಿ ಅದು ಸದಾ ಇದ್ದೇ ಇದೆ. ಇದರ ಫಲಿತಾಂಶ, ಒಂದು ದೇಶದ ನಿವಾಸಿಯಾದ ನಾಗರಿಕ ಹೇಗೆ ಆ ದೇಶದ ಕಾನೂನನ್ನು ಅವ್ಯಕ್ತವಾಗಿ ಅಂಗೀಕರಿಸುತ್ತಾನೆ, ಹಾಗೆ ನೀವೂ ಕೂಡ ಸ್ವೀಕರಿಸಿದ್ದೀರಿ. ನಿಸ್ಸಂದಿಗ್ಧವಾದ, ನಿಶಬ್ದವಾದ ಹಾಗೂ ನಿರ್ಬಂಧವಿಲ್ಲದ ಅಂಗೀಕಾರ. ನೀವು ಇನ್ನೂ ಊಹಿಸಿರದಿದ್ದರೆ, ನಾನು ಉಲ್ಲೇಖಿಸುತ್ತಿರುವುದು ನಿರೀಕ್ಷೆ ಎನ್ನುವ ಮಹಾ ಹೊರೆಯನ್ನು.
ನಿಮ್ಮಲ್ಲಿ ಯಾವುದೇ ನಿರೀಕ್ಷೆಗಳು ಇಲ್ಲ, ಅಥವಾ ತುಂಬಾ ಮೂಲಭೂತವಾದ ಹಾಗೂ ವಾಸ್ತವಿಕವಾದ ನಿರೀಕ್ಷೆಗಳು ಇವೆ ಎಂದು ನಿಮ್ಮ ವಿಶ್ವಾಸವಿರಬಹುದು. ನಾನು ನಿಮಗೆ ಉತ್ತೇಜಿಸುತ್ತೇನೆ, ಕೆಳಗಿನ ವಿಭಾಗವನ್ನು ಓದಿದ ನಂತರ ಮತ್ತೊಮ್ಮೆ ಯೋಚಿಸಿ ನೋಡಲು.
ನಿರೀಕ್ಷೆ ಅನ್ನುವಂಥದ್ದು, ಯಾವ ತರಹದ ಬಯಕೆಗಳು ಅಂದರೆ, ಅದನ್ನು ಪೂರೈಸಿಕೊಳ್ಳುವುದು ನಿಮ್ಮ ಹಕ್ಕು ಎಂದು ನೀವು ಭಾವಿಸುತ್ತೀರಿ. ಹಲವಾರು ಅಂಶಗಳ ಪ್ರೇರಣೆಯಿಂದ ನೀವು ಸ್ವತಃ ನಿಯಮಾಧೀನರಾಗಿ ನಿರೀಕ್ಷೆಗಳನ್ನು ಬೆಳೆಸಿಕೊಳ್ಳುತ್ತೀರಿ. ಇದು ಎಲ್ಲಾ ದುಃಖಕ್ಕೂ ಹಾಗೂ ಒತ್ತಡಗಳಿಗೂ ಪ್ರಮುಖ ಕಾರಣ. ನೀವು ತೊರೆಯದೆ ಇಟ್ಟುಕೊಂಡಿರುವ ದೀರ್ಘಕಾಲದ ಯೋಚನೆಗಳೇ ಬಯಕೆಗಳಾಗಿ ಪರಿವರ್ತನೆಯಾಗುವುದು. ನೀವು ಬೆಂಬಿಡದೆ ಅನುಸರಿಸಿದ ಯೋಚನೆಗಳು; ಇವೇ ನಿಮ್ಮ, ಪ್ರಪಂಚ ನಿರ್ಮಾಣದ ವಸ್ತುಗಳು.
ನಿಮ್ಮ ಸುತ್ತಲೂ ವ್ಯಾಮೋಹವೆಂಬ ಗಾರೆಯಿಂದ, ಬಯಕೆಗಳ ಗೋಡೆಯನ್ನು ನಿರ್ಮಿಸುತ್ತಾ ಕೊನೆಯಲ್ಲಿ ತಪ್ಪಿಸಿಕೊಳ್ಳಲು ಬಾಗಿಲುಗಳೂ ಸಹ ಇಲ್ಲದಂತೆ ಸಿಕ್ಕಿಹಾಕಿಕೊಳ್ಳುವಿರಿ. ಇದು ಗಹನವಾದ ವಿಷಯ, ಇದನ್ನು ಇನ್ನೊಮ್ಮೆ ವಿಷದೀಕರಿಸುತ್ತೇನೆ.
ಈಗ ಪ್ರಸ್ತುತ ವಿಷಯದತ್ತ ಗಮನ ಹರಿಸಿದರೆ, ಬಯಕೆಗಳು ನಿಮ್ಮ ಪ್ರಪಂಚವನ್ನು ಪುಷ್ಟಿಕರಿಸಿದರೆ, ನಿರೀಕ್ಷೆಗಳು ಧ್ವಂಸಮಾಡುತ್ತದೆ, ಹಾಗೂ ಯೋಚನೆಗಳು ಪ್ರಪಂಚವನ್ನು ಸೃಷ್ಟಿಸುತ್ತದೆ. ಇವೆಲ್ಲ ಮನಸ್ಸಿನ ಉತ್ಪನ್ನಗಳು, ಸಾಮಾನ್ಯವಾಗಿ ಚಂಚಲ ಹಾಗೂ ಅಪ್ರಬುದ್ಧ ಮನಸ್ಸಿನದು. ನಾನು ಕಂಡಂತೆ ನಿರೀಕ್ಷೆಗಳಲ್ಲಿ ಮೂರು ವಿಧಗಳು, ಅವು:
ಸ್ವ ನಿರೀಕ್ಷೆ:
ನಿಮ್ಮ ವಿದ್ಯಾಭ್ಯಾಸ, ಸಂಸ್ಕಾರ, ಪಾಲನೆ, ನಿಮ್ಮ ಸಾಮಾಜಿಕ ವರ್ಗ, ಹಾಗೂ ನಿಮ್ಮ ವೃತ್ತಿಜೀವನ – ಇವೆಲ್ಲವೂ ನೀವು ಯೋಚನೆ ಮಾಡುವ ರೀತಿಯಲ್ಲಿ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ – ಇದರಿಂದ ನೀವು ಬೇರೆಯವರ ಮುಂದೆ ಹೇಗಿರಬೇಕು ಎಂದು ನೀವು ಸ್ವತಃ ನಿರೀಕ್ಷಿಸುತ್ತೀರಿ. ನಿಮಗೆ ಹಲವಾರು ರೂಪಗಳಲ್ಲಿ ವರ್ಗಾವಣೆಯಾದ ಮಾಹಿತಿಗಳ ಆಧಾರಿತ, ಸಾಮಾನ್ಯವಾಗಿ ನೀವು ಪಾಲಿಸುವ ಧರ್ಮದ ಹಾಗೂ ನೀವು ಒಡನಾಡುವ ಸಂಘದ ಆಧಾರಿತ, ಸಾಮಾಜಿಕ ಹಾಗೂ ವೈಯಕ್ತಿಕ, ಈ ಅಂಶಗಳನ್ನೂ ಸಹ ಸೇರಿಸಿ, ನೀವು ನಿಮಗೆ ಒಂದು ಮಾನದಂಡ ಹಾಗೂ ಗುಣಮಟ್ಟವನ್ನು ನಿಗದಿಪಡಿಸಿಕೊಳ್ಳುತ್ತೀರಿ. ನಿಮ್ಮಿಂದ, ನಿಮ್ಮ ಬಗೆಗಿನ ನಿರೀಕ್ಷೆಗಳು ಕೈಗೊಳ್ಳದಿದ್ದರೆ, ಅಪಮಾನ ಹಾಗೂ ತಪ್ಪಿತಸ್ಥ ಭಾವನೆಗಳು ಜನ್ಮ ನೀಡುತ್ತವೆ. ನಿಮಗೆ ಕೀಳರಿಮೆ ಹಾಗೂ ಹಿಂಸೆ ಎಂದೆನಿಸುತ್ತದೆ.
ಹೀಗೆ, ನಿರಾಕರಣೆ ಹಾಗೂ ಅಪನಂಬಿಕೆಯ ಸ್ಥಿತಿಯಲ್ಲಿ, ಶೋಚನೀಯವಾಗಿ ಹಾಗೂ ಕಳೆದುಹೋದಂತೆ ನಿಮಗೆ ಅನಿಸುತ್ತದೆ. ಶಾಶ್ವತವಾಗಿ ಈ ನಿರೀಕ್ಷೆಗಳಲ್ಲಿ ನೀವು ಹುದುಗಿ ಹೋಗುತ್ತೀರಿ, ಬಹುಪಾಲು ಇವೆಲ್ಲಾ ದೊಡ್ಡ ನಿಷ್ಪ್ರಯೋಜಕ ಹೊರೆಗಳು; ಕೊಳೆಯುತ್ತಿರುವ ತ್ಯಾಜ್ಯಗಳು, ಮತ್ತೇನಿಲ್ಲ.
ಅದನ್ನೆಲ್ಲಾ ಸೋಸಿ ಬಿಡಿ. ನಿಮ್ಮ ಅಂತಃಕರಣವನ್ನು ಪುಷ್ಟೀಕರಿಸುವುದನ್ನು ಹಾಗೂ ನಿಮ್ಮನ್ನು ಹೆಚ್ಚಿನ ಸಹಾನುಭೂತಿಯುಳ್ಳ ವ್ಯಕ್ತಿಯನ್ನಾಗಿಸುವುದನ್ನು ಮಾತ್ರ ಉಳಿಸಿಕೊಳ್ಳಿ. ನೀವು ಖುದ್ದು ಯಾವ ರೀತಿಯ ವ್ಯಕ್ತಿಯಾಗಲು ಬಯಸುತ್ತೀರಾ, ವ್ಯತಿರಿಕ್ತವಾಗಿ ಬೇರೆಯವರ ಕಣ್ಣಲ್ಲಿ ಹೇಗೆ ಕಾಣಿಸಲು ಬಯಸುತ್ತೀರಾ ಅವಲೋಕಿಸಿ ನೋಡಿ. ನಿಮಗೆ ಒಂದು ಒಳನೋಟ ದೊರೆಯಬಹುದು.
ಪರರಿಂದ ನಿರೀಕ್ಷೆಗಳು:
ಇವು, ನಿಮಗೆ ಸೂಕ್ತವೆನಿಸುವ ಹಾಗೂ ನ್ಯಾಯಸಮ್ಮತವಾಗಿ ನೀವು ಇದಕ್ಕೆ ಅರ್ಹರು ಎಂಬ ತಪ್ಪು ಗ್ರಹಿಕೆಯುಳ್ಳವುಗಳು. ಪ್ರತಿಸ್ಪಂದನೆ, ಪ್ರೀತಿ, ವಸ್ತುಗಳು, ಮಾತುಗಳು, ಪ್ರತಿಕ್ರಿಯೆಗಳು – ಅದು ಯಾವುದೇ ಆಗಲಿ. ನೀವು ಗಮನಿಸಿದ್ದು ಹಾಗೂ ಗ್ರಹಿಸಿದ್ದು, ನಿಮಗೆ ಹೇಳಿದ್ದು ಹಾಗೂ ಹೇಳಿಕೊಟ್ಟಿದ್ದು, ನೀವು ಮಾಡಿರುವಿರಿ ಎಂದು ಅನಿಸಿದ್ದು, ನೀವು ಇವೆಲ್ಲವುಗಳಿಂದ ಕೆಲವು ಫಲಿತಾಂಶವನ್ನು ಇಚ್ಛಿಸುತ್ತೀರ, ಬಹುಶಃ ಅನುಕೂಲಕರವಾದದ್ದು, ಹಾಗೂ ನೀವು ಇಚ್ಚಿಸುತ್ತಿರುವುದು ನ್ಯಾಯಸಮ್ಮತವಾದದ್ದು, ಸೂಕ್ತವಾದದ್ದು, ಹಾಗೂ ಸಹಜವಾದದ್ದು ಎಂದು ನಿಮಗೆ ಅನಿಸುವುದರಿಂದ, ನಿಮ್ಮ ನಿರೀಕ್ಷೆಯ ಹೊರೆಯನ್ನು ಹೆಚ್ಚಿಸಿಕೊಳ್ಳುತ್ತೀರ.
ಇವೆಲ್ಲದರ ಪರಿಣಾಮವಾಗಿ, ಕೆಲವೂಮ್ಮೆ ನಿಮಗೆ ಯಾವುದರಿಂದ ನಿರೀಕ್ಷೆ ಇದೆಯೋ ಅದಕ್ಕೆ ಹೆಚ್ಚು ಒತ್ತಡ ಹೇರುತ್ತದೆ, ಪ್ರತಿಯಾಗಿ ನಿಮ್ಮ ಒತ್ತಡ ಇನ್ನೂ ಹೆಚ್ಚುತ್ತದೆ. ಈ ನಿರೀಕ್ಷೆಗಳು ಪೂರೈಸದಿದ್ದಾಗ, ಅವು ನಿಮ್ಮ ನಿರೀಕ್ಷೆಯ ಸಮ ಪ್ರಮಾಣದಷ್ಟೇ ನಿಮಗೆ ಹತಾಶೆಯನ್ನೂ ಕೊಡುತ್ತದೆ. ನೀವು ಕಾಳಜಿ ವಹಿಸುವ ಜನಗಳು ಹಾಗೂ ಅವರಿಂದ ನೀವು ಏನನ್ನು ನಿರೀಕ್ಷಿಸುತ್ತೀರ ಎಂದು ಒಂದು ಪಟ್ಟಿಮಾಡಿ. ಮುಗಿದ ನಂತರ, ನಿಮಗೆ ತಿಳಿಯುತ್ತದೆ, ನೀವು ಎಷ್ಟು ಅವರಿಂದ ನಿರೀಕ್ಷಿಸುತ್ತೀರೋ, ಅವರೂ ಅಷ್ಟೇ ನಿಮ್ಮಿಂದ ನಿರೀಕ್ಷಿಸುತ್ತಾರೆ ಎಂದು. ನಿಮ್ಮ ನಿರೀಕ್ಷೆಗಳನ್ನು ಸಡಿಲಿಸಿ, ಹಾಗೂ ನಿಮ್ಮ ಶುದ್ಧೀಕೃತವಾದ ಪ್ರಜ್ಞೆಯ ಕಾರಣದಿಂದ ಅವರು ನಿಮ್ಮನ್ನು ಇದ್ದ ಹಾಗೇ ಸ್ವೀಕರಿಸುತ್ತಾರೆ, ಕ್ರಮೇಣ ಅವರೂ ಸಹ ನಿಮ್ಮ ಮೇಲಿನ ನಿರೀಕ್ಷೆಯನ್ನು ಕಡಿಮೆಗೊಳಿಸುತ್ತಾರೆ. ಪ್ರಕೃತಿ ಕೆಲಸ ಮಾಡುವುದು ಹೀಗೆ. ನನ್ನ ಮಾತನ್ನು ಸುಮ್ಮನೆ ಸ್ವೀಕರಿಸಬೇಡಿ; ಪ್ರಯತ್ನ ಮಾಡಿ ನೋಡಿ.
ನಿಮ್ಮಿಂದ ಪರರ ನಿರೀಕ್ಷೆಗಳು:
ಇವು ನಿಮಗೆ ಒತ್ತಡ ಹೇರಲು ರೂಪಿಸಲಾಗಿದೆ. ನೀವು ನಿಮ್ಮ ಸಹಚರರಿಂದ, ಮೇಲಧಿಕಾರಿಗಳಿಂದ, ಸ್ನೇಹಿತರಿಂದ, ಹಾಗೂ ಕುಟುಂಬದಿಂದ ನಿರಂತರ ಒತ್ತಡದಿಂದಿರುತ್ತೀರಿ. ನೀವು ನಿಮ್ಮ ಹೊರೆಯನ್ನು ಅವರ ಮೇಲೆ ಹೇರಿದ್ದೀರಿ, ಹಾಗೂ ಅವರು ನಿಮ್ಮ ಮೇಲೆ. ಹೆಚ್ಚುವರಿ ಕೆಲವೊಂದು ಮೂಲವಾದುವನ್ನು ಬಿಟ್ಟು, ಮಿಕ್ಕಿದ್ದನ್ನೆಲ್ಲಾ ತ್ಯಜಿಸಬಹುದು. ನೀವು ಅವರ ನಿರೀಕ್ಷೆಗಳನ್ನು ಪೂರೈಸುತ್ತೀರೋ ಇಲ್ಲವೋ, ಕೇವಲ, ನಿರೀಕ್ಷೆಗಳು ಇವೆ ಎಂಬ ಅರಿವು ಸಾಕು, ನಿಮ್ಮನ್ನು ನಿರ್ಬಂಧಕ್ಕೆ ಒಳಪಡಿಸಲು, ಹಾಗೂ ಈಗಿರುವ ಪ್ರಕ್ಷುಬ್ಧ ಮನಸ್ಸನ್ನು ಇನ್ನಷ್ಟು ಗೊಂದಲಪಡಿಸಲು. ನೀವು ನಿಮ್ಮಿಂದ ಇರುವ ನಿರೀಕ್ಷೆಗಳ ಬಗ್ಗೆ ಸ್ಪಷ್ಟವಾಗಿದ್ದರೆ, ಹಾಗೂ ಬೇರೆಯವರಿಂದಿರುವ ನಿರೀಕ್ಷೆಯನ್ನು ತೊರೆದರೆ, ಮಿಕ್ಕಿದ್ದೆಲ್ಲಾ ಸ್ವಯಂ ಕಣ್ಮರೆಯಾಗುತ್ತದೆ. ನಿಮ್ಮ ಹೊಸತನ ಬೇರೆಯವರನ್ನು ಹಾಗೂ ಅವರ ನಿರೀಕ್ಷೆಗಳನ್ನು ನಿಶಬ್ದವಾಗಿ ನಿರ್ಬಂಧಿಸುತ್ತದೆ.
ನೀವು ಏನು ಬೇಕಾದರೂ ಮಾಡಿ; ನೈತಿಕತೆಯನ್ನು ಮಾತ್ರ ಬಿಡಬೇಡಿ, ಅದು ಆನಂದದ ಅಡಿಪಾಯ, ಎಲ್ಲಾ ಸದ್ಗುಣಗಳ ಮೂಲ. ಸದ್ಗುಣಗಳಿಂದ ಕೂಡಿದ ಜೀವನ, ಅದು ಎಷ್ಟೇ ಅವಿಶ್ರಾಂತಿಯಿಂದಿರಲಿ ಅಥವಾ ತೊಡರುಗಳಿಂದಿರಲಿ, ಪರಿಣಾಮ ಯಾವಾಗಲೂ ಶಾಂತಿಯುತವಾಗಿರುತ್ತದೆ.
ಜೂನ್ ನಲ್ಲಿ ಬರೆದ ಕೊನೆಯ ಲೇಖನಿಯ ನಂತರ, ನಾನು ಕಾಮಾಕ್ಯ (ಪೂರ್ವ ಭಾರತ – ಆಸ್ಸಾಂ) ಗೆ ಪ್ರಯಾಣಿಸಿದೆ. ಅಲ್ಲಿ ನಾನು ತುಂಬಾ ಮುಖ್ಯವಾದ ಒಂದು ಪ್ರಾರಂಭಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿತ್ತು. ವಿವಿಧ ಕ್ಷೇತ್ರಗಳಲ್ಲಿರುವ ಬೌದ್ಧರ ಮಠಗಳನ್ನು ಸಂದರ್ಶಿಸಲು ಸಮಯ ಹಾಗೂ ಅವಕಾಶವೂ ಇತ್ತು. ಅವುಗಳಲ್ಲಿ ಬಹಳಷ್ಟು ಮಠಗಳು ಸುಂದರವಾದ ಪರ್ವತಗಳಲ್ಲಿ, ಫಲವತ್ತಾದ ಸಸ್ಯಕ ಪ್ರದೇಶಗಳಲ್ಲಿ ಸ್ಥಾಪಿತವಾಗಿವೆ. ಅವುಗಳು ಅದ್ಭುತವಾದ ಪ್ರಾಚೀನತೆಯನ್ನು ವಿವರಿಸುತ್ತವೆ.
ಆಧ್ಯಾತ್ಮವನ್ನು ಸಂಸ್ಥೀಕರಣಗೊಳಿಸಿದರೆ, ಎಲ್ಲದರ ಹಾಗೆ, ಪರಿಶೋಧನೆಗೆ ಒತ್ತು ನೀಡದೆ, ಅತಿಯಾದ ಪ್ರಾಶಸ್ತ್ಯವನ್ನು ಕಾರ್ಯನಿರ್ವಹಣೆಗೆ ನೀಡುವುದರ ಪರಿಣಾಮ ಧರ್ಮದ ಹುಟ್ಟು; ಎಂಬ ನನ್ನ ವಿಚಾರ ಈ ಸಂಘಗಳನ್ನು ಸಂದರ್ಶಿಸಿದಾಗ ದೃಡವಾಯಿತು. ಆಧ್ಯಾತ್ಮಕ್ಕೆ ಧರ್ಮದ ಗುರುತು ಚೀಟಿಯನ್ನು ಅಂಟಿಸಿದರೆ ಅದು ನಿರ್ಜೀವವಾಗುತ್ತದೆ. ಅನ್ವೇಷಣೆಯನ್ನು ತೊರೆದು, ಕೆಲಸ-ಕಾರ್ಯಗಳಲ್ಲಿ ನಿರತರಾದ ಲಾಮಾಗಳು, ಸತ್ಯವನ್ನು ಕಂಡುಕೊಳ್ಳುವುದಕ್ಕಿಂತ ಹೆಚ್ಚು, ಸಂಪ್ರದಾಯವನ್ನು ಅನುಸರಿಸುವುದರಲ್ಲಿ ಮಗ್ನರಾಗಿದ್ದರು.
ಒಬ್ಬ ಅಲೆಮಾರಿ ಸಾಧುವಿನ ಹುರುಪಿನಿಂದ, ಪೂರ್ವ ಹಿಮಾಲಯವನ್ನೆಲ್ಲಾ ಅಲೆದಾಡಿ, ಅಡವಿಯ ಒಳಗೆ, ಗುಡಿಸಲು ಎಂದು ಹೇಳಬಹುದಾದಂಥಹ ಒಂದು ಸ್ಥಳದಲ್ಲಿ, ಒಂದು ತಿಂಗಳ ಮಂತ್ರ ಸಾಧನೆಯನ್ನು ಮಾಡಲು ಉಳಿದುಕೊಂಡೆ. ನಾನು ಈ ಮೊದಲೆಲ್ಲಾ ಉಳಿದುಕೊಂಡಿದ್ದ ಸ್ಥಳದಷ್ಟು ನಿರ್ಜನವಲ್ಲದಿದ್ದರೂ, ನಿಶಬ್ದ ಹಾಗೂ ಪ್ರಶಾಂತವಾಗಿತ್ತು. ಆಹಾ! ಎಂತಹ ಪರಮಾನಂದ!
ನಾನು ಏನು ಹೇಳುತ್ತಿದ್ದೇನೆ ಎಂದು ಅರಿಯಲು ಹಿಮಾಲಯದ ಏಕಾಂತವನ್ನು ನೀವು ಅನುಭವಿಸಿ ನೋಡಬೇಕು. ಏಕಾಂತದಲ್ಲಿದ್ದಾಗ ಮಾತ್ರ ನಿಮ್ಮ ಯೋಚನೆಗಳ ಹರಿವು ಹಾಗೂ ನಿಮ್ಮ ಮನಸ್ಸಿನ ಸ್ವಾಭಾವಿಕತೆಯನ್ನು ಅರಿತುಕೊಳ್ಳಬಹುದು. ನಿಜವಾದ ಸೌಂದರ್ಯ ನಿಮಗೆ ಅರಿವಾಗುತ್ತದೆ. ಮತ್ತು ಸೌಂದರ್ಯ ನೋಡುಗರ ಕಣ್ಣಲ್ಲಿ ಅಲ್ಲ, ಗ್ರಹಿಸುವ ಮನದಲ್ಲಿ ಇದೆ. ಮನಸ್ಸು ಎಷ್ಟು ತಿಳಿಯಾಗಿದೆಯೋ, ಅಷ್ಟು ಅಧಿಕ ಸೌಂದರ್ಯ, ಮತ್ತು ಮನಸ್ಸು ಎಷ್ಟು ಪ್ರಶಾಂತವಾಗಿದೆಯೋ, ಅನುಭವ ಅಷ್ಟು ಸುದೀರ್ಘವಾಗಿರುತ್ತದೆ. ಖಾಲಿ ಮನಸ್ಸು ಭೂತದ ಕಾರ್ಯಾಗಾರವಲ್ಲ; ಭಾವೋದ್ರಿಕ್ತ ಮನಸ್ಸು. ಒಂದು ಸರಿ ರೀತಿಯಲ್ಲಿ, ಖಾಲಿ ಮನಸ್ಸು, ದೇವರ ಕೃಪೆಯೇ ಆಗಿದೆ.
ತನ್ನ ಸ್ವಾಭಾವಿಕತೆಯನ್ನು ಕಂಡುಕೊಂಡ ಪ್ರಶಾಂತವಾದ ಮನಸ್ಸು, ನಿಮ್ಮನ್ನು ಮುಕ್ತವಾಗಿಸುತ್ತದೆ. ನೀವು ಕೊನೆಯ ಸಲ ಯಾವಾಗ ಸ್ವಾತಂತ್ರವನ್ನು ಅನುಭವಿಸಿದ್ದೀರಿ? ಅಂದರೆ, ನಿಜವಾದ ಸ್ವಾತಂತ್ರ್ಯ? ಹಂಗಿಲ್ಲದೆ ಹರಿಯುವ ನದಿಯ ಹಾಗೆ, ಪರಿಧಿಯೊಳಗಾಗದ ಗಾಳಿಯ ಹಾಗೆ, ಆಕಾಶದೆತ್ತರಕ್ಕೆ ಹಾರುವ ಪಕ್ಷಿಯ ಹಾಗೆ, ಅಥವಾ ಲೌಕಿಕ ಮಾರ್ಗವನ್ನು ತ್ಯಜಿಸಿದ ಹಾಗೂ, ಈ ಮುಂಚೆ ತನ್ನ ಅಂತಃಪ್ರಜ್ಞೆಯನ್ನು ಕಲುಷಿತಗೊಳಿಸಿದ, ಭಯ, ತಪ್ಪಿತಸ್ಥ ಭಾವನೆ, ಅಪಮಾನ, ಮತ್ತು ಪರಂಪರೆಗಳನ್ನು ತೊರೆದ ಸನ್ಯಾಸಿಯ ಹಾಗೆ ಸ್ವತಂತ್ರವಾಗಿರಬೇಕೆ?
ದಂತ ಸ್ವಾಸ್ಥ್ಯದಿಂದ ಉದಯಿಸಿದ ಒಂದು ಉಪಸಂಹಾರ:
ಜೀವನ ಒಂದು ಟೂತ್ ಪೇಸ್ಟ್ ಟ್ಯೂಬ್ ನ ಹಾಗೆ. ಆರಂಭದಲ್ಲಿ, ಅದು ಭರ್ತಿಯಾಗಿದೆ ಹಾಗೂ ಬೇಕಾದಷ್ಟಿದೆ ಎಂದೆನಿಸುತ್ತದೆ. ಮೊದಲು ಕೆಲವು ಬಾರಿ ಉಪಯೋಗಿಸುವವರೆಗೆ ಹೀಗೇ ಅನಿಸುತ್ತದೆ. ತದನಂತರ, ಆಕಾರದಲ್ಲಿ ನಗ್ಗು-ತಗ್ಗುಗಳು ಆಗುತ್ತವೆ. ವಿಶೇಷವಾಗಿ, ನೀವು ಸೂಕ್ಷ್ಮ ವಿವರಗಳಿಗೆ ಗಮನ ಕೊಡುವವರಾಗಿದ್ದರೆ, ನಂತರದ ಪ್ರತಿಯೊಂದು ಹಿಸುಕಿನಲ್ಲೂ, ನೀವು ಟ್ಯೂಬ್ ನ ಆಕಾರವನ್ನು ಸರಿಮಾಡಲು ಶುರು ಮಾಡುತ್ತೀರಿ. ಇನ್ನೂ ಅರ್ಧ ಸಹ ಖಾಲಿ ಆಗಿರುವುದಿಲ್ಲ, ಆಗಲೇ ನೀವು ಪ್ರತಿ ಬಾರಿ ಪೇಸ್ಟನ್ನು ಕೆಳಗಿನಿಂದ ಮೇಲೆ ತಳ್ಳಲು ಶುರು ಮಾಡುತ್ತೀರಿ. ನಿಮಗೆ ತಿಳಿಯುವ ಮೊದಲೇ ಪೇಸ್ಟ್ ಖಾಲಿಯಾಗುತ್ತಾ ಬಂದಾಗಿರುತ್ತದೆ. ಆದರೆ ಖಾಲಿ ಆಯಿತು ಎಂದು ಅಂದುಕೊಂಡರೂ, ಸ್ವಲ್ಪ ಗಟ್ಟಿಯಾಗಿ ಒತ್ತಿದರೆ ಇನ್ನೂ ಸ್ವಲ್ಪ ಪೇಸ್ಟ್ ಹೊರ ಬರುತ್ತದೆ. ಒಬ್ಬನ ನಿರೀಕ್ಷೆಗಳ ಹಾಗೆ, ಅಥವಾ ಸಾಲಗಾರನ ಹಾಗೆ, ಅದೂ ಕೂಡ ಚಪ್ಪಟೆಯಾಗಿ, ಪೂರ್ತಿ ಟೂತ್ ಪೇಸ್ಟ್ ಖಾಲಿ ಆಗುವುದು ಅಪರೂಪ. ಇನ್ನು ಇಲ್ಲವೇ ಇಲ್ಲ, ಎಂದು ಆಗುವುದರೊಳಗೆ ಹೊಸದೊಂದು ತಂದುಕೊಳ್ಳಲು ಅವಕಾಶ ಸಿಗುತ್ತದೆ.
ಅದೇ ರೀತಿ, ಆರಂಭದಲ್ಲಿ ಜೀವನ ತುಂಬಾ ದೀರ್ಘ, ಪೂರ್ಣ ಹಾಗೂ ಸಾಕಷ್ಟು ಎನಿಸುತ್ತದೆ. ಬಾಲ್ಯವು ತುಂಬಾ ವೇಗವಾಗಿ ಕಳೆಯುತ್ತದೆ, ಅದಾದ ನಂತರ, ಹೆಚ್ಚು-ಕಡಿಮೆ ಹೊಂದಾಣಿಕೆಯೇ ಜೀವನವಾಗಿ, ನೀವು ಕೊನೆಯನ್ನು ತಲುಪಿ, ಕಷ್ಟಪಟ್ಟು ಒತ್ತುತ್ತಿರುವುದನ್ನು ಕಾಣುತ್ತೀರಿ. ಆದರೆ, ಈ ಶರೀರವನ್ನು ತ್ಯಜಿಸಿದ ನಂತರ, ಟೂತ್ ಪೇಸ್ಟ್ ನ ಹಾಗೆ ಹೊಸದೊಂದು ಶರೀರ ನಿಮಗಾಗಿ ನಿರೀಕ್ಷಿಸುತ್ತಿರುತ್ತದೆ. ನೀವು ನಿರೂಪಿಸಿದಂತೆ ನಿಮ್ಮ ಜೀವನ. ನಿಮ್ಮ ದೇಹದ ಪ್ರತಿಯೊಂದು ಕೋಶದಲ್ಲಿನ, ಪ್ರತೀ ಪರಮಾಣುವಿನಲ್ಲಿ, ಪರಮಾಣು ಶಕ್ತಿ ಇದೆ, ಅದು ಆಸಂಖ್ಯ ಕೋಟಿಯಲ್ಲಿದೆ. ನೀವು ವಿಕಿರಣಕ್ಕೆ ಹೆದರಿ ಅದನ್ನು ಹುದುಗಿಸಿಡುತ್ತೀರೋ, ಅಥವಾ ಅದರಿಂದ ಪರಮಾಣು ರಿಯಾಕ್ಟರ್ (ಬೈಜಿಕ ಕ್ರಿಯಾಕಾರಿ) ಯನ್ನು ತಯಾರಿಸುತ್ತೀರೋ ಅದು ನಿಮ್ಮ ಆಯ್ಕೆ, ಅಥವಾ ನೀವು ನಿಮ್ಮ ದುಷ್ಟ ಚಿಂತನೆಗಳ ಅಡಿಯಾಳಾಗಿ ವಿಧ್ವಂಸಕ ಉಪಕರಣಗಳನ್ನು ಉತ್ಪಾದಿಸುತ್ತೀರೋ, ಆಯ್ಕೆ ನಿಮ್ಮದು.
ಹೋಗಿ, ಜೀವನವನ್ನು ಆನಂದಿಸಿ! ಜೀವನದಲ್ಲಿ ಶ್ರೇಷ್ಠವಾದದ್ದನ್ನು ಹಿಂಡಿ ತೆಗೆಯಿರಿ, ಜೀವವನ್ನಲ್ಲ. ಭವಿಷ್ಯದ ಪುಸ್ತಕದಲ್ಲಿ ಏನಿದೆಯೋ ಎಂದು ಚಿಂತಿಸುವುದನ್ನು ಬಿಡಿ. ಅರ್ಥಹೀನ ಹೋರಾಟಗಳನ್ನು ತೊರೆದುಬಿಡಿ. ಜೀವನ ಪ್ರತಿಯೊಂದು ಕ್ಷಣ ತೆರೆದುಕೊಳ್ಳುವುದನ್ನು ವೀಕ್ಷಿಸಿ. ಚಿರಯೌವನ, ಸೌಂದರ್ಯ, ಆನಂದ ಹಾಗೂ ಹರ್ಷದ ಆಂತರಿಕ ಅಮೃತದ ಪುಷ್ಕರಣಿಯನ್ನು ಕಂಡುಕೊಳ್ಳಿ. ನಿಮ್ಮ ಜೀವನವನ್ನು ಟೂತ್ ಪೇಸ್ಟ್ ಅನ್ನು ಹಂಚಿಕೊಂಡಂತೆ ಬೇರೆಯವರೊಂದಿಗೆ ಹಂಚಿಕೊಳ್ಳಿ, ಆದರೆ ನೀವು ಮಾತ್ರ ಹಂಚಿಕೊಳ್ಳದ ಟೂತ್ ಬ್ರಷ್ ನಂತೆ ಇರಿ.
ಶಾಂತಿ,
ಸ್ವಾಮಿ.
Translated from: Himalayan Expectations
Edited by: H. R. Ravi Kumar, Retd. Engineer, Shimoga.
Painting inspired by(copied from😛) https://youtu.be/fftxKnsBvO4
Comments & Discussion
8 COMMENTS
Please login to read members' comments and participate in the discussion.